ADVERTISEMENT

ರಾಷ್ಟ್ರೀಯ ರೈಫಲ್ಸ್ ಯೋಧ ಔರಂಗಜೇಬ್ ಹತ್ಯೆ ಪ್ರಕರಣದಲ್ಲಿ ‘ಸೈನಿಕರ ಕೈವಾಡ’ ಶಂಕೆ

ಏಜೆನ್ಸೀಸ್
Published 7 ಫೆಬ್ರುವರಿ 2019, 11:37 IST
Last Updated 7 ಫೆಬ್ರುವರಿ 2019, 11:37 IST
ಔರಂಗಜೇಬ್‌
ಔರಂಗಜೇಬ್‌   

ಶ್ರೀನಗರ: ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರಿಂದ ಹತ್ಯೆಯಾಗಿದ್ದ ರಾಷ್ಟ್ರೀಯ ರೈಫಲ್ಸ್‌ ಯೋಧ ಔರಂಗಜೇಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸೈನಿಕರನ್ನು ಸೇನೆ ವಿಚಾರಣೆ ನಡೆಸಿದೆ. ಇದರೊಂದಿಗೆ ಯೋಧನ ಹತ್ಯೆ ಪ್ರಕರಣದಲ್ಲಿ ಸೈನಿಕರೂ ಭಾಗಿಯಾಗಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ.

ಮೂಲಗಳ ಪ್ರಕಾರ, ರಾಷ್ಟ್ರೀಯ ರೈಫಲ್ಸ್‌–44 ಬೆಟಾಲಿಯನ್‌ನ ಮೂವರು ಯೋಧರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗಿದೆ. ಜೊತೆಗೆ ಶಂಕಿತ ಯೋಧರು ಔರಂಗಜೇಬ್‌ ಹಾಗೂ ಶಿಬಿರದ ಕಾರ್ಯಾಚರಣೆಗೆ ಸಂಬಂಧಿಸಿದ ಮಾಹಿತಿಯನ್ನು ಉಗ್ರರೊಡನೆ ಹಂಚಿಕೊಂಡಿರಬಹುದು ಎಂಬಅನುಮಾನ ಸೇನೆಗಿದೆ’ ಎನ್ನಲಾಗಿದೆ.

ಶಂಕಿತ ಯೋಧರನ್ನು ಆದಿಬ್‌ ವಾನಿ, ತಾಜಾಮುಲ್‌ ಅಹ್ಮದ್‌ ಹಾಗೂ ಆದಿಲ್‌ ವಾನಿ ಎಂದು ಗುರುತಿಸಲಾಗಿದ್ದು, ಮೂವರೂ ದಕ್ಷಿಣ ಕಾಶ್ಮೀರದವರು. ರಕ್ಷಣಾ ಇಲಾಖೆ ವಕ್ತಾರ ರಾಜೇಶ್‌ ಕಲಿಯಾ, ‘ಔರಂಗಜೇಬ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಗಳು ವ್ಯಕ್ತವಾಗಿರುವುದರಿಂದ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಉಗ್ರ ಟೈಗರ್‌ ಸಮೀರ್‌ನನ್ನು ಹತ್ಯೆ ಮಾಡಿದ್ದ ಮೇಜರ್‌ ರೋಹಿತ್‌ ಶುಕ್ಲಾ ಅವರ ಅಂಗರಕ್ಷಕನಾಗಿ ಔರಂಗಜೇಬ್‌ಕಾರ್ಯನಿರ್ವಹಿಸಿದ್ದರು. ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರ ಸಮೀರ್‌ ಹತ್ಯೆಗಾಗಿ 2018ರ ಏಪ್ರಿಲ್‌ 30ರಂದು ನಡೆದ ಕಾರ್ಯಾಚರಣೆ ವೇಳೆ ಶುಕ್ಲಾ ಅವರ ಕಾಲಿಗೆ ಗಂಭೀರ ಗಾಯವಾಗಿತ್ತು.ಬಳಿಕ ಔರಂಗಜೇಬ್‌ ಅವರನ್ನುರಾಷ್ಟ್ರೀಯ ರೈಫಲ್ಸ್‌ಗೆ ನಿಯೋಜಿಸಲಾಗಿತ್ತು.

ಔರಂಗಜೇಬ್‌ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ವೇಳೆ ಸೇನಾಧಿಕಾರಿಗಳ ತನಗೆ ಹಿಂಸೆ ನೀಡಿದ್ದಾರೆ ಎಂದು ತೌಸೀಫ್‌ ಅಹ್ಮದ್‌ ವಾನಿ ಎಬಾತ ಹೇಳಿಕೆ ನೀಡಿದ್ದ. ತೌಸೀಫ್‌ ವಾನಿ ಶಂಕಿತ ಯೋಧ ಆಬಿದ್‌ ವಾನಿಯ ಸಹೋದರ. ಸದ್ಯ ಶ್ರೀನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವತೌಸೀಫ್‌ ಹೇಳಿಕೆ ಬಳಿಕವೇ ಯೋಧರ ವಿಚಾರಣೆ ವಿಚಾರ ಬೆಳಕಿಗೆ ಬಂದಿರುವುದು.

ಕಳೆದ ವರ್ಷ ಜುಲೈನಲ್ಲಿ ಈದ್ ಆಚರಣೆಗಾಗಿ ಪೂಂಚ್‌ನಲ್ಲಿರುವ ತನ್ನ ಮನೆಗೆ ತೆರಳುತ್ತಿದ್ದ ವೇಳೆಔರಂಗಜೇಬ್‌ ಅಪಹರಣಕ್ಕೊಳಗಾಗಿದ್ದರು. ಫಾರೂಕ್‌ ಅಹ್ಮದ್‌ ಅಲ್ಲಾಯ್‌ ಎನ್ನುವವರ ಕಾರಿನಲ್ಲಿ ಪುಲ್ವಾಮಾ ಬಸ್‌ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕಾರ್‌ಅನ್ನು ಅಡ್ಡಗಟ್ಟಿದ ಉಗ್ರರು, ಯೋಧನನ್ನುಅಪಹರಿಸಿದ್ದರು. ಅಲ್ಲಿಂದ ಸುಮಾರು ಹತ್ತು ಕಿ.ಮೀ ದೂರದ ಕಲಾಂಪೋರಾ ಎಂಬಲ್ಲಿ ಶವ ಪತ್ತೆಯಾಗಿತ್ತು. ಕುತ್ತಿಗೆ ಹಾಗೂ ತಲೆ ಭಾಗಕ್ಕೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಪ್ರಕರಣ ಸಂಬಂಧ ರಾಜ್‌ಪೋರಾ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದ ಅಲ್ಲಾಯ್‌, ‘ಕಾರನ್ನು ಅಡ್ಡಗಟ್ಟಿ ನನ್ನ ಮೇಲೆ ಹಲ್ಲೆ ನಡೆಸಿದ ಉಗ್ರರು ಔರಂಗಜೇಬ್‌ನ್ನು ಎಳೆದೊಯ್ದರು’ ಎಂದು ಹೇಳಿಕೆ ನೀಡಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.