ADVERTISEMENT

‘ಕಾಲಾ ಕುಮಾರಸ್ವಾಮಿ’ ಎಂಬ ಜಮೀರ್ ಹೇಳಿಕೆ: ಕಿರಣ್ ರಿಜಿಜು ಖಂಡನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2024, 11:23 IST
Last Updated 11 ನವೆಂಬರ್ 2024, 11:23 IST
ಕಿರಣ್ ರಿಜಿಜು
ಕಿರಣ್ ರಿಜಿಜು   

ನವದೆಹಲಿ: ಕೇಂದ್ರ ಸಚಿವ ಕುಮಾರಸ್ವಾಮಿಯವರನ್ನು ವಸತಿ ಸಚಿವ ಜಮೀರ್ ಅಹಮದ್ ಕಾಲಾ ಕುಮಾರಸ್ವಾಮಿ ಎಂದು ಕರೆದಿರುವುದನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಖಂಡಿಸಿದ್ದಾರೆ.

ಕರ್ನಾಟಕದ ಸಚಿವರು ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ರಿಜಿಜು ಹೇಳಿದ್ದಾರೆ.

‘ಕೇಂದ್ರ ಸಚಿವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕಾಂಗ್ರೆಸ್‌ನ ಸಚಿವ ಜಮೀರ್ ಅಹಮದ್, ‘ಕಾಲಾ ಕುಮಾರಸ್ವಾಮಿ’ ಎಂದು ಕರೆದಿರುವುದನ್ನು ನಾನು ಖಂಡಿಸುತ್ತೇನೆ’ಎಂದು ರಿಜಿಜು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಇದೊಂದು ಜನಾಂಗೀಯ ನಿಂದನೆ. ಇದೇ ರೀತಿ ದಕ್ಷಿಣ ಭಾರತೀಯರು ಆಫ್ರಿಕಾದವರ ರೀತಿ ಕಾಣುತ್ತಾರೆ, ಈಶಾನ್ಯ ಭಾರತೀಯರು ಚೀನಾದವರಂತೆ ಮತ್ತು ಉತ್ತರ ಭಾರತೀಯರು ಅರಬ್ಬಿನವರಂತೆ ಕಾಣುತ್ತಾರೆ ಎಂದು ರಾಹುಲ್ ಗಾಂಧಿ ಸಲಹೆಗಾರರು ಹೇಳಿಕೆ ನೀಡಿದ್ದರು ಎಂದು ರಿಜಿಜು ಹೇಳಿದ್ದಾರೆ.

ಜೆಡಿಎಸ್ ಕಿಡಿ

‘ಕಾಲಾ ಕುಮಾರಸ್ವಾಮಿ’ ಎಂದು ಜಮೀರ್ ಅಹಮದ್ ಕರೆದಿರುವ ವಿಡಿಯೊವನ್ನು ಜೆಡಿಎಸ್ ಹಂಚಿಕೊಂಡಿದೆ.

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ವಸತಿ ಖಾತೆ ಸಚಿವ ಜಮೀರ್ ಅಹಮದ್ ಜನಾಂಗೀಯ ನಿಂದನೆ ಮಾಡಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ರಾತ್ರಿ ಪ್ರಚಾರದ ವೇಳೆ ಬಹಿರಂಗ ಸಭೆಯಲ್ಲಿ ಸಾರ್ವಜನಿಕವಾಗಿ ಕೇಂದ್ರ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ ಅವರನ್ನು, ​ಜಮೀರ್​ ಅಹ್ಮದ್​ ಖಾನ್‌ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಎಂದು ಉರ್ದು ಭಾಷೆಯಲ್ಲಿ ನಿಂದಿಸಿದ್ದಾರೆ.

ಈ ಮೂಲಕ ಕಪ್ಪು ವರ್ಣದವರ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಅಷ್ಟೆ ಅಲ್ಲದೇ ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಜೋದಿಸಿರುವ ಜಮೀರ್​ ಅಹ್ಮದ್​ ಬಾಯಿಂದ ಬಂದಿರುವ ಈ ಜನಾಂಗೀಯ ದ್ವೇಷದ ಮಾತುಗಳು ಅಕ್ಷಮ್ಯ. ಅಪರಾಧ. ಈ ಕೂಡಲೇ ಗೃಹ ಸಚಿವರಾದ ಜಿ.ಪರಮೇಶ್ವರ, ರಾಮನಗರ ಜಿಲ್ಲಾ ಪೊಲೀಸರು, ಜನಾಂಗೀಯ ನಿಂದನೆ, ವರ್ಣಭೇದ ಹಾಗೂ ಸಮಾಜದಲ್ಲಿ ಶಾಂತಿ ಕದಡಲು ಯತ್ನಿಸಿರುವ ಸಚಿವ ಜಮೀರ್‌ ಅಹ್ಮದ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಾತ್ಯತೀತ ಜನತಾದಳ ಪಕ್ಷವು ಆಗ್ರಹಿಸುತ್ತದೆ ಎಂದು ಅಧಿಕೃತ ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆ ಉಳಿಸಿಕೊಂಡಿದ್ದರೇ ಮೊದಲು ಈ ಜನಾಂಗೀಯ ದ್ವೇಷಿ ಜಮೀರ್‌ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.