ADVERTISEMENT

ನ್ಯಾಯಾಂಗದೊಂದಿಗಿನ ಸಂಘರ್ಷದಿಂದಲೇ ಹೆಚ್ಚು ಸುದ್ದಿಯಾದ ಕಿರಣ್ ರಿಜಿಜು

ಪಿಟಿಐ
Published 18 ಮೇ 2023, 16:34 IST
Last Updated 18 ಮೇ 2023, 16:34 IST
ಕಿರಣ್ ರಿಜಿಜು
ಕಿರಣ್ ರಿಜಿಜು   

ನವದೆಹಲಿ : ಕಿರಣ್‌ ರಿಜಿಜು ಅವರು ಕೇಂದ್ರ ಕಾನೂನು ಸಚಿವರಾಗಿದ್ದ ಅವಧಿಯಲ್ಲಿ ಹಲವು ಬಾರಿ ನ್ಯಾಯಾಂಗದೊಂದಿಗೆ ಸಂಘರ್ಷಕ್ಕಿಳಿದಿದ್ದರು. ಅದರಲ್ಲೂ, ಹೈಕೋರ್ಟ್‌ಗಳಿಗೆ ಮತ್ತು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರು. ಅವರಿಗೆ ಕಾನೂನು ಖಾತೆಯಿಂದ ತೆಗೆದು, ಭೂವಿಜ್ಞಾನದ ಹೊಣೆ ನೀಡುವುದಕ್ಕೆ ಈ ಸಂಘರ್ಷ, ಟೀಕೆಗಳೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಅರುಣಾಚಲಪ್ರದೇಶದಿಂದ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿರುವ ರಿಜಿಜು ಅವರಿಗೆ ಪ್ರಮುಖವಾದ ಕಾನೂನು ಖಾತೆ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅವರು ನೀಡಿದ್ದ ಹೇಳಿಕೆಗಳು ಅನೇಕ ಬಾರಿ ವಿವಾದಕ್ಕೀಡಾಗಿದ್ದವು. ‘ಕೊಲಿಜಿಯಂ ವ್ಯವಸ್ಥೆಯು ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂಬ ಟೀಕೆ, ಕೆಲ ನಿವೃತ್ತ ನ್ಯಾಯಮೂರ್ತಿಗಳು ಭಾರತ ವಿರೋಧಿ ಗುಂಪಿನ ಭಾಗವಾಗಿದ್ದಾರೆ’ ಎಂಬ ರಿಜಿಜು ಅವರ ಆರೋಪಗಳಿಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ‘ಅಂಕಲ್–ಜಡ್ಜ್ ಸಿಂಡ್ರೋಮ್’ ಎಂದು ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ನ್ಯಾಯಮೂರ್ತಿಗಳ ನೇಮಕಾತಿ ಸಂದರ್ಭದಲ್ಲಿ ತಾನು ಪರಿಶೀಲಿಸುವ ಗುಪ್ತಚರ ಸಂಸ್ಥೆ ಹಾಗೂ ‘ಆರ್‌ ಆ್ಯಂಡ್‌ ಎಎಚ್‌’ನ ವರದಿಗಳನ್ನು ಸುಪ್ರೀಂಕೋರ್ಟ್‌ ಕೊಲಿಜಿಯಂ ಬಹಿರಂಗಪಡಿಸುತ್ತಿದ್ದ ಕ್ರಮದ ಬಗ್ಗೆ ರಿಜಿಜು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೂ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.

ADVERTISEMENT

ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಆರಂಭಿಸಿದ ಸಂದರ್ಭದಲ್ಲಿ,  ‘ಮದುವೆ ವಿಷಯಕ್ಕೆ ಸಂಬಂಧಿಸಿ ಸಂಸತ್‌ ನಿರ್ಧಾರ ಕೈಗೊಳ್ಳಬೇಕು. ಸಂಸತ್‌, ಜನರನ್ನು ಪ್ರತಿನಿಧಿಸುತ್ತದೆಯೇ ಹೊರತು ನ್ಯಾಯಾಲಯಗಳು ಅಲ್ಲ’ ಎಂದು ಹೇಳಿದ್ದರು. ಇದು ಕೂಡ ತೀವ್ರ ಟೀಕೆಗೆ ಒಳಗಾಗಿತ್ತು.

ಆಗ, ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಇದೆ ಎಂಬ ಆರೋಪಗಳನ್ನು ರಿಜಿಜು ತಳ್ಳಿ ಹಾಕಿದ್ದರು. ‘ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಮಹಾಭಾರತ ನಡೆಯುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಚರ್ಚೆ ಇರುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು.

ನ್ಯಾಯಮೂರ್ತಿಗಳ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡಲಾಗುತ್ತಿದ್ದ ಬಗ್ಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಪತ್ರವೊಂದನ್ನು ಬರೆದಿದ್ದರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ರಿಜಿಜು, ಈ ಪತ್ರ ಕುರಿತು ಪ್ರಸ್ತಾಪಿಸಿ, ‘ತೀರ್ಪುಗಳನ್ನು ಪ್ರಕಟಿಸುವಾಗ ನ್ಯಾಯಮೂರ್ತಿಗಳು ಎಚ್ಚರದಿಂದ ಇರಬೇಕು. ಅವುಗಳ ಬಗ್ಗೆ ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಬಹುದು’ ಎಂದಿದ್ದರು.

‘ರಾಜಕಾರಣಿಗಳಂತೆ ನ್ಯಾಯಮೂರ್ತಿಗಳು ಚುನಾವಣೆಗಳನ್ನು ಎದುರಿಸಬೇಕಾಗಿಲ್ಲ’ ಎಂದೂ ಹೇಳಿದ್ದರು.

ನ್ಯಾಯಾಂಗದ ನೇಮಕಾತಿಗಳಲ್ಲಿ ವಿಳಂಬ ಮಾಡಿದ್ದಕ್ಕಾಗಿ ಕಳೆದ ನವೆಂಬರ್‌ನಲ್ಲಿ ರಿಜಿಜು ಅವರು ಸುಪ್ರೀಂಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ‘ಉನ್ನತ ನ್ಯಾಯಾಲಯಗಳಿಗೆ ಮಾಡಿರುವ ನೇಮಕಾತಿಗಳಿಗೆ ಸರ್ಕಾರ ಅನುಮೋದನೆ ನೀಡದೇ ಇರುವುದಕ್ಕೆ ‘ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ)ವನ್ನು ರದ್ದುಪಡಿಸಿದ್ದು ಕಾರಣವೇ’ ಎಂದು ಸುಪ್ರೀಂಕೋರ್ಟ್‌ ಪ್ರಶ್ನಿಸಿತ್ತು.

ಕ್ರೀಡಾ ಸಚಿವರಾಗಿದ್ದಾಗ ರಿಜಿಜು ಅವರು, ರಾಷ್ಟ್ರೀಯ ಕ್ರೀಡೆಗಳಲ್ಲಿ ವಿಜೇತರಿಗೆ ನೀಡುವ ಬಹುಮಾನದ ಮೊತ್ತವನ್ನು ಹೆಚ್ಚಿಸಲು ಕ್ರಮ ತೆಗೆದುಕೊಂಡಿದ್ದರು. ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಹಾಲಿ ಹಾಗೂ ಮಾಜಿ ಅಥ್ಲೀಟ್‌ಗಳಿಗೆ ತ್ವರಿತವಾಗಿ ಹಣಕಾಸು ನೆರವು ನೀಡುವ ವ್ಯವಸ್ಥೆ ಮಾಡಿದ್ದರು.

ಟೋಕಿಯೊ ಒಲಿಂಪಿಕ್ಸ್‌ ಆರಂಭವಾಗುವುದಕ್ಕೆ ಎರಡು ವಾರಗಳ ಮುಂಚೆ, 2021ರ ಜುಲೈನಲ್ಲಿ ರಿಜಿಜು ಅವರಿಗೆ ಕಾನೂನು ಸಚಿವರಾಗಿ ಬಡ್ತಿ ನೀಡಲಾಯಿತು. ಆಗ ಕ್ರೀಡಾ ಸಚಿವರಾಗಿದ್ದ ಅನುರಾಗ್ ಠಾಕೂರ್ ಅವರನ್ನು ಕ್ರೀಡಾ ಸಚಿವರನ್ನಾಗಿ ನೇಮಕ ಮಾಡಲಾಯಿತು.

51 ವರ್ಷದ ರಿಜಿಜು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದಾರೆ. ಗೃಹ ಖಾತೆ ರಾಜ್ಯ ಸಚಿವ, ಅಲ್ಪಸಂಖ್ಯಾತರ ವ್ಯವಹಾರಗಳ ರಾಜ್ಯ ಸಚಿವ, ಯುವ ಮತ್ತು ಕ್ರೀಡಾ ವ್ಯವಹಾರಗಳ ರಾಜ್ಯ ಸಚಿವರಾಗಿ (ಸ್ವತಂತ್ರ ಖಾತೆ) ಕಾರ್ಯ ನಿರ್ವಹಿಸಿದ್ದರು. 2021ರಲ್ಲಿ ಅವರಿಗೆ ಕಾನೂನು ಖಾತೆ ಹೊಣೆ ನೀಡಲಾಗಿತ್ತು.

ರಿಜಿಜು ಅವರು ಕೇಮದ್ರ ಸಚಿವ ಸಂಪುಟದಲ್ಲಿ ಈಶಾನ್ಯ ಭಾರತ ಪ್ರತಿನಿಧಿಸುವರಲ್ಲಿ ಪ್ರಮುಖರು.

ಈಗ, ಕಾನೂನು ಖಾತೆಯ ಜವಾಬ್ದಾರಿ ಹೊತ್ತಿರುವ ಮೆಘವಾಲ್‌ ಅವರು ರಾಜಸ್ಥಾನದ ಬಿಕಾನೇರ್‌ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ಧಾರೆ. ರಾಜಕೀಯಕ್ಕೂ ಬರುವ ಮೊದಲು ಅವರು ಅಧಿಕಾರಿಯಾಗಿದ್ದ ಮೆಘವಾಲ್, ವಿವಾದಗಳಿಂದ ದೂರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.