ADVERTISEMENT

ಬೆಲೆ ಏರಿಕೆಯಿಂದ ₹23 ಲಕ್ಷ ಕೋಟಿ ಸಂಗ್ರಹ: ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ (ಜಿಡಿಪಿ) ಬೆಲೆ ಹೆಚ್ಚಳಕ್ಕೆ ಆಕ್ರೋಶ

ಪಿಟಿಐ
Published 1 ಸೆಪ್ಟೆಂಬರ್ 2021, 20:35 IST
Last Updated 1 ಸೆಪ್ಟೆಂಬರ್ 2021, 20:35 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ’ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ₹23 ಲಕ್ಷ ಕೋಟಿ ಆದಾಯ ಸಂಗ್ರಹಿಸಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಕೇಂದ್ರದ ವಿರುದ್ಧ ಕಿಡಿಕಾರಿರುವ ಅವರು, ‘ರೈತರು, ನೌಕರರು ಮತ್ತು ಕಾರ್ಮಿಕ ವರ್ಗದವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಲಾಗುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಕೆಲವು ಉದ್ಯಮಿ ಸ್ನೇಹಿತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ಬಡವರ ಆಸ್ತಿಯು ಪ್ರಧಾನಿ ಅವರ ಸ್ನೇಹಿತರಿಗೆ ವರ್ಗಾವಣೆಯಾಗುತ್ತಿದೆ’ ಎಂದು ದೂರಿದ್ದಾರೆ.

‘ಕೇಂದ್ರ ಸರ್ಕಾರ ಜಿಡಿಪಿ ಎನ್ನುವ ಹೊಸ ಕಲ್ಪನೆಯನ್ನು ಆರಂಭಿಸಿದೆ. ಅಂದರೆ, ಗ್ಯಾಸ್ (ಅಡುಗೆ ಅನಿಲ), ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಹೆಚ್ಚಳ ಮಾಡುವುದಾಗಿದೆ. ಇವುಗಳಿಂದ ಸಂಗ್ರಹವಾಗಿರುವ ₹23 ಲಕ್ಷ ಕೋಟಿ ಮೊತ್ತ ಎಲ್ಲಿ ಹೋಗಿದೆ ಎನ್ನುವುದನ್ನು ದೇಶದ ಜನತೆ ಪ್ರಶ್ನಿಸಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

‘ತಾನು ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದಕ್ಕೆ ಸರ್ಕಾರ ಆತಂಕಗೊಂಡಿದೆ. ಕೇವಲ ಇಂಧನಗಳ ಬೆಲೆಗಳ ಮೇಲೆ ಸರ್ಕಾರ ಬದುಕುತ್ತಿದೆ’ ಎಂದು ತಿಳಿಸಿದ್ದಾರೆ.

‘2014ರಿಂದ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲದ ಅಂತರರಾಷ್ಟ್ರೀಯ ಬೆಲೆಗಳು ಕಡಿಮೆಯಾಗಿವೆ. ಆದರೆ, ಭಾರತದಲ್ಲಿ ಮಾತ್ರ ಬೆಲೆಗಳು ಗಗನಕ್ಕೇರಿವೆ. ದೇಶವು ಒಗ್ಗಟ್ಟಾಗಿ ಈ ಅನ್ಯಾಯದ ವಿರುದ್ಧ ಹೋರಾಟ ನಡೆಸಲಿದೆ’ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

2014ರ ಆರಂಭದಲ್ಲಿ ಯುಪಿಎ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿನ ಬೆಲೆಗಳನ್ನು ಈಗಿನ ಬೆಲೆಗಳಿಗೆ ಅವರು ಹೋಲಿಕೆ ಮಾಡಿರುವ ವಿವರಗಳನ್ನು ಈ ಸಂದರ್ಭದಲ್ಲಿ ಅವರು ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.