ಗುವಾಹಟಿ: ‘ಅಸ್ಸಾಂನಲ್ಲಿ ಎಚ್‌ಐವಿ–ಏಡ್ಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಇದಕ್ಕೆ ಮಾದಕದ್ರವ್ಯ ವ್ಯಸನಿಗಳು ಬಳಸುವ ಸಿರಿಂಜ್‌ಗಳೇ ಕಾರಣ’ ಎಂದು ಆರೋಗ್ಯ ಸಚಿವ ಕೇಶವ್ ಮಹಾಂತಾ ವಿಧಾನಸಭೆಯಲ್ಲಿ ಹೇಳಿದ್ದಾರೆ.
‘ಸ್ವಯಂ ಸೇವಾ ಸಂಸ್ಥೆಗಳ ಜತೆಗೂಡಿ ಸರ್ಕಾರವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಎಚ್‌ಐವಿ ಸೋಂಕಿತರೊಂದಿಗೆ ಸರ್ಕಾರ ಹಾಗೂ ಸಂಸ್ಥೆಗಳು ಸಂಪರ್ಕದಲ್ಲಿವೆ’ ಎಂದ ಅವರು ರೋಗಿಗಳ ಗುರುತಿನ ಗೋಪ್ಯತೆ ಕಾಪಾಡುವ ನಿಟ್ಟಿನಲ್ಲಿ ವಿವರಗಳನ್ನು ಹಂಚಿಕೊಂಡಿಲ್ಲ.
ಅಧಿವೇಶನದ ಪ್ರಶ್ನೋತ್ತರ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕಿ ಸಿಬಮೋನಿ ಮೋರಾ ಅವರು ಎಚ್‌ಐವಿ ಸೋಂಕಿತರ ಸಂಖ್ಯೆ ಗಣನೀಯ ಏರಿಕೆ ಕುರಿತಂತೆ ಪ್ರಶ್ನೆ ಕೇಳಿದರು. ಈ ಭಾರೀ ಏರಿಕೆಗೆ ಮಾದಕದ್ರವ್ಯ ವ್ಯಸನಿಗಳೇ ಕಾರಣ ಎಂದೂ ಸದನಕ್ಕೆ ಹೇಳಿದರು. ಜತೆಗೆ ಸೋಂಕಿತರ ಸಂಖ್ಯೆ ಏರಿಕೆಗೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದೂ ಆರೋಪಿಸಿದರು.
‘ರಾಜ್ಯದಲ್ಲಿ 31,729 ಎಚ್‌ಐವಿ–ಏಡ್ಸ್ ಸೋಂಕಿತರನ್ನು ಪತ್ತೆ ಮಾಡಲಾಗಿದೆ. 2002ರಿಂದ 2023ರವರೆಗೆ 89.84 ಲಕ್ಷ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. 2023ರ ಡಿಸೆಂಬರ್‌ವರೆಗೆ 9.90 ಲಕ್ಷ ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ 5,791 ಜನರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ ಏರಿಕೆಯಾಗಿರುವುದು ನಿಜ. ಆ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ’ ಎಂದು ಮಹಾಂತಾ ಅವರು ಸದನಕ್ಕೆ ತಿಳಿಸಿದರು.
'ಎಚ್‌ಐವಿ ಸೋಂಕಿತರ ಸಂಖ್ಯೆ ಏರಿಕೆಗೆ ಮಾದಕ ವ್ಯಸನಿಗಳು ಬಳಸುತ್ತಿರುವ ಸಿರಿಂಜ್‌ಗಳೇ ಕಾರಣ. ಹೀಗಾಗಿ ಮಾದಕದ್ರವ್ಯ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜತೆಗೆ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕೊಂಡಿಯಂತಿರುವ ಅಸ್ಸಾಂಗೆ ಬಂದು ಹೋಗುವವರ ಸಂಖ್ಯೆಯೂ ದೊಡ್ಡದಿದೆ. ಹೊರ ರಾಜ್ಯಗಳ ರೋಗಿಗಳು ರಾಜ್ಯದಲ್ಲಿ ತಪಾಸಣೆಗೆ ಒಳಪಟ್ಟರೂ, ಅವರ ಸಂಖ್ಯೆಯೂ ರಾಜ್ಯಕ್ಕೇ ಸೇರುವುದೂ ಈ ಏರಿಕೆಗೆ ಕಾರಣ’ ಎಂದು ಮಹಾಂತಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.