ನವದೆಹಲಿ: ‘ನಗರ ವಸತಿ ಯೋಜನೆಗಳಲ್ಲಿರುವ ಲೋಪಗಳಿಂದಾಗಿ ಅಕ್ರಮ ನಿರ್ಮಾಣಗಳು ಹೆಚ್ಚುತ್ತಿವೆ. ಕೈಗೆಟಕುವ ದರದಲ್ಲಿ ವಸತಿ ಕಲ್ಪಿಸದ ಸರ್ಕಾರಗಳ ವೈಫಲ್ಯವೂ ಇದಕ್ಕೆ ಕಾರಣ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ಸೂರು ಹೊಂದುವುದು ವ್ಯಕ್ತಿಯ ಮೂಲಭೂತ ಹಕ್ಕು. ಆದರೆ, ಆರ್ಥಿಕವಾಗಿ ದುರ್ಬಲ ವರ್ಗಗಳ ವಸತಿ ಬೇಡಿಕೆ ಮತ್ತು ಸರ್ಕಾರ ಕೆಳಮಟ್ಟದಲ್ಲಿ ಜಾರಿಗೊಳಿಸುತ್ತಿರುವ ನೀತಿಗಳಿಗೂ ಅಜಗಜಾಂತರ ಅಂತರವಿದೆ’ ಎಂದೂ ಅಭಿಪ್ರಾಯಪಟ್ಟಿತು.
ಲಖನೌದ ಅಕ್ಬರ್ ನಗರದಲ್ಲಿ ವಾಣಿಜ್ಯ, ವಸತಿ ನಿರ್ಮಾಣಗಳ ನೆಲಸಮ ಕಾರ್ಯಾಚರಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಅವರಿದ್ದ ನ್ಯಾಯಪೀಠ ಹೀಗೆ ಹೇಳಿತು.
ಇದೇ ವೇಳೆ ನೆಲಸಮ ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತು. ನಿವಾಸಿಗಳ ಅರ್ಜಿಗಳನ್ನು ಈ ಮುನ್ನ ಅಲಹಾಬಾದ್ ಹೈಕೋರ್ಟ್ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ನಿವಾಸಿಗಳು ‘ಸುಪ್ರೀಂ’ ಮೆಟ್ಟಿಲೇರಿದ್ದರು.
‘ವಸತಿ ವಿಷಯ ಕುರಿತು ಮೊದಲೇ ಸ್ಪಷ್ಟಪಡಿಸುತ್ತೇವೆ. ಇಲ್ಲೊಂದು ಸಮಸ್ಯೆಯಿದೆ. ನಮ್ಮ ನಗರೀಕರಣ ನೀತಿಗಳಲ್ಲಿ ನ್ಯೂನತೆಗಳಿವೆ. ವಸ್ತುಸ್ಥಿತಿ ಗಮನಿಸುವುದಾದರೆ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸೌಲಭ್ಯ ಕಲ್ಪಿಸಿಲ್ಲ. ಎಲ್ಲೊ ಒಂದು ಕಡೆ ಒದಗಿಸಬೇಕಾಗಿದೆ. ನಗರಗಳಿಗೆ ಜನರು ಗುಳೆ ಹೋಗುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ವಸತಿ ಬೇಡಿಕೆ ಹಾಗೂ ಕೆಳಮಟ್ಟದಲ್ಲಿ ಆಗುತ್ತಿರುವ ಕಾರ್ಯ ಚಟುವಟಿಕೆಗಳಿಗೂ ದೊಡ್ಡ ಅಂತರವಿದೆ’ ಎಂದು ಹೇಳಿತು.
‘ದೆಹಲಿಯಲ್ಲೇ ಏಕೆ ಅಷ್ಟೊಂದು ಅನಧಿಕೃತ ಕಾಲೊನಿಗಳಿವೆ? ಏಕೆಂದರೆ ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಶೇ 60–70 ಭೂಮಿ ಎಲ್ಲಿದೆ ಎಂಬುದರ ಮಾಹಿತಿಯೇ ಇಲ್ಲ. ಎಲ್ಲವೂ ಅತಿಕ್ರಮಣವಾಗಿವೆ’ ಎಂದು ಪೀಠವು ಅಭಿಪ್ರಾಯಪಟ್ಟಿತು.
ಅರ್ಜಿಯ ವಿಚಾರಣೆ ಆಲಿಸಿದ ಪೀಠ, ‘ತೀರ್ಪು ಪ್ರಕಟಿಸುವವರೆಗೂ ಲಖನೌ ಅಭಿವೃದ್ಧಿ ಪ್ರಾಧಿಕಾರ ಅಥವಾ ರಾಜ್ಯ ಸರ್ಕಾರ ನೆಲಸಮ ಕಾರ್ಯಾಚರಣೆ ನಡೆಸಬಾರದು. ಹೈಕೋರ್ಟ್ ಆದೇಶಕ್ಕೆ ಬದ್ಧರಾಗಿರಬೇಕು’ ಎಂದು ಸೂಚಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.