ADVERTISEMENT

ಬಿಸಿಗಾಳಿ ಪರಿಣಾಮ; ವಿದ್ಯುತ್ ಬೇಡಿಕೆ ಗರಿಷ್ಠ ಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:52 IST
Last Updated 18 ಜೂನ್ 2024, 15:52 IST
...
...   

ನವದೆಹಲಿ: ಉತ್ತರ ಭಾರತದಲ್ಲಿ ಬಿಸಿ ಗಾಳಿ ಮುಂದುವರೆಯುತ್ತಿದ್ದು, ವಿದ್ಯುತ್ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಪೂರೈಕೆದಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ಇಂಧನ ಸಚಿವಾಲಯವು, ಬಲವಂತದ ವಿದ್ಯುತ್ ಕಡಿತವನ್ನು ಕನಿಷ್ಠ ಮಟ್ಟಕ್ಕಿಳಿಸುವಂತೆ ಸೂಚಿಸಿದೆ.

ಸವಾಲಿನ ಪರಿಸ್ಥಿತಿಯ ನಡುವೆಯೂ, ಉತ್ತರ ಭಾಗದ ಗರಿಷ್ಠ ಮಟ್ಟದ ಬೇಡಿಕೆಯಂತೆ 89 ಗಿಗಾ ವ್ಯಾಟ್ (ಜಿಡಬ್ಲ್ಯು) ವಿದ್ಯುತ್ ಅನ್ನು ಜೂನ್ 17, 2024ರಂದು ಪೂರೈಸಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. 

ಮಂಗಳವಾರ ದೆಹಲಿಯಲ್ಲಿ ಮಧ್ಯಾಹ್ನ 8,647 ಮೆಗಾವ್ಯಾಟ್ ಬೇಡಿಕೆ ಇದ್ದು, ಅದು ನಗರದಲ್ಲಿ ಇದುವರೆಗೆ ಗರಿಷ್ಠ ಮಟ್ಟದ ಬೇಡಿಕೆ ಆಗಿತ್ತು. ಮೇ 22, 2024ರ 8000 ಮೆಗಾವ್ಯಾಟ್ ಬೇಡಿಕೆಯೇ ಇದುವರೆಗಿನ ಗರಿಷ್ಠ ದಾಖಲೆಯಾಗಿತ್ತು. ಸೋಮವಾರ ದೆಹಲಿಯ ಹಲವೆಡೆ ಅರ್ಧ ಗಂಟೆಯಿಂದ ಒಂದು ಗಂಟೆವರೆಗೆ ವಿದ್ಯುತ್ ಕಡಿತ ಮಾಡಲಾಗಿತ್ತು.

ADVERTISEMENT

ಮೇ 17, 2024ರಿಂದ ಉತ್ತರ ಭಾರತದಲ್ಲಿ ಬಿಸಿ ಗಾಳಿಯಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ. ಜೂನ್ 20ರ ನಂತರ ಬಿಸಿ ಗಾಳಿ ಕಡಿಮೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.