ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿ ಬಿಜೆಪಿ ಶಾಸಕಿ ರಿತು ಖಂಡೂರಿ ಅವರು ಅವಿರೋಧವಾಗಿ ಶನಿವಾರ ಚುನಾಯಿತರಾದರು.
ರಿರು ಅವರು ಆಯ್ಕೆ ಆದ ಕುರಿತು ಹಂಗಾಮಿ ಸ್ಪೀಕರ್ ಬನ್ಶೀಂದರ್ ಭಗತ್ ಅವರು ಘೋಷಿಸಿದರು. ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಿತು ಅವರನ್ನು ಅಭಿನಂದಿಸಿದರು.
‘ಇದು ನಮಗೆಲ್ಲಾ ಐತಿಹಾಸಿಕ ದಿನವಾಗಿದೆ. ರಿತೂ ಮೂಲಕ ನಾವು ಮೊದಲ ಮಹಿಳಾ ಸ್ಪೀಕರ್ ಅವರನ್ನು ಪಡೆದಿದ್ದೇವೆ. ಉತ್ತರಾಖಂಡ ರಾಜ್ಯ ರಚನೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಎಲ್ಲಾ ಮಹಿಳೆಯರಿಗೆ ನೀಡಿದ ಗೌರವವಿದು’ ಎಂದು ಧಾಮಿ ಹೇಳಿದರು.
ಸ್ಪೀಕರ್ ಆಗಿ ಆಯ್ಕೆ ಆದ ಬಳಿಕ ಶಾಸಕರನ್ನು ಉದ್ದೇಶಿಸಿ ಭಾಷಣ ಮಾಡಿದ ರಿತು, ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವವರು ಈ ಐದು ವರ್ಷದ ಅವಧಿಯಲ್ಲಿ ಶಾಸನ ಸಭೆಯ ಕಾರ್ಯವಿಧಾನಕಲಿಯಲು ಬಳಸಿಕೊಳ್ಳಬೇಕು. ಸಾರ್ವಜನಿಕರ ಹಿತಾಸಕ್ತಿ ಕುರಿತಂತೆ ಚರ್ಚೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.
ರಿತು ಅವರು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಬಿ.ಸಿ. ಖಂಡೂರಿ ಅವರ ಮಗಳು. ಕೋಟದ್ವಾರ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಮಾಜಿ ಮಂತ್ರಿ ಎಸ್.ಎಸ್. ನೇಗಿ ಅವರ ವಿರುದ್ಧ ಜಯ ಸಾಧಿಸಿದ್ದರು.
*
ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವ ಮಸೂದೆಯು ರಿತೂ ಅವರ ನೇತೃತ್ವದಲ್ಲಿ ಜಾರಿ ಆಗುವಂತಾಗಲಿ.
-ಪುಷ್ಕರ್ ಸಿಂಗ್ ಧಾಮಿ, ಉತ್ತರಾಖಂಡ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.