ನವದೆಹಲಿ: ಮಲಯಾಳ ಮನೋರಮಾ ಸಮೂಹದ ನಿರ್ದೇಶಕ ಮತ್ತು ಮುಖ್ಯ ಸಹ ಸಂಪಾದಕ ರಿಯಾದ್ ಮ್ಯಾಥ್ಯೂ ಅವರು ಆಡಿಟ್ ಬ್ಯೂರೊ ಆಫ್ ಸರ್ಕ್ಯೂಲೇಷನ್‌ನ (ಎಬಿಸಿ) 2024–25ನೇ ಸಾಲಿನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ರಿಯಾದ್ ಮ್ಯಾಥ್ಯೂ ಅವರು ಮೇರಿಲ್ಯಾಂಡ್ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಾಷಿಂಗ್ಟನ್ ಪೋಸ್ಟ್, ವಾಷಿಂಗ್ಟನ್ ಟೈಮ್ಸ್ ಮತ್ತು ಕ್ಯಾಪಿಟಲ್ ನ್ಯೂಸ್ ಸರ್ವೀಸಸ್‌ನಲ್ಲಿ ತರಬೇತಿ ಪಡೆದಿದ್ದಾರೆ. ಅವರು 2009ರ ಆಗಸ್ಟ್‌ನಿಂದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದು, 2016-17ರ ಅವಧಿಯಲ್ಲಿ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.
ಅಲ್ಲದೆ, ವಿಯೆನ್ನಾ ಮೂಲದ ಇಂಟರ್‌ನ್ಯಾಷನಲ್ ಪ್ರೆಸ್ ಇನ್ಸ್ಟಿಟ್ಯೂಟ್ (ಐಪಿಐ) ಮಂಡಳಿಯ ಸದಸ್ಯರಾಗಿ 2023ರ ಮೇ ವರೆಗೆ ಕರ್ತವ್ಯ ನಿರ್ವಹಿಸಿ, ಈಗ ಐಪಿಐ ಇಂಡಿಯಾದ ಅಧ್ಯಕ್ಷರಾಗಿದ್ದಾರೆ. ಮೀಡಿಯಾ ರಿಸರ್ಚ್ ಯೂಸರ್ಸ್ ಕೌನ್ಸಿಲ್‌ನ (ಎಂಆರ್‌ಯುಸಿ) ನಿರ್ದೇಶಕರ ಮಂಡಳಿಯಲ್ಲಿ ನಿರ್ದೇಶಕರಾಗಿ ಮತ್ತು ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜೀನ್ಸ್ (ಎಐಎಂ) ಮಂಡಳಿಯ ಸದಸ್ಯರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಎಬಿಸಿಯ ಆಡಳಿತ ಮಂಡಳಿಯಲ್ಲಿ ಜಾಹೀರಾತುದಾರರು/ಗ್ರಾಹಕರನ್ನು ಪ್ರತಿನಿಧಿಸುವ ಐಟಿಸಿ ಲಿಮಿಟೆಡ್‌ನ ಕರುಣೇಶ್ ಬಜಾಜ್ ಅವರು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಎಬಿಸಿಯು ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
ಮಂಡಳಿಯಲ್ಲಿ ಪ್ರಕಾಶಕ ಸದಸ್ಯರನ್ನು ಪ್ರತಿನಿಧಿಸುವ ಬೆನೆಟ್ ಕೋಲ್‌ಮನ್ ಆ್ಯಂಡ್ ಕಂಪನಿ ಲಿಮಿಟೆಡ್‌ನ ಮೋಹಿತ್ ಜೈನ್ ಅವರು ಕಾರ್ಯದರ್ಶಿಯಾಗಿ ಮತ್ತು ಖಜಾಂಚಿಯಾಗಿ ಜಾಹೀರಾತು ಏಜೆನ್ಸಿಗಳ ಸದಸ್ಯರ ಪ್ರತಿನಿಧಿ ಮ್ಯಾಡಿಸನ್ ಕಮ್ಯುನಿಕೇಷನ್ ಪ್ರೈವೇಟ್ ಲಿಮಿಟೆಡ್‌ನ ವಿಕ್ರಮ್ ಸಖೂಜ ಅವರನ್ನು ಅವಿರೋಧವಾಗಿ ಪುನರಾಯ್ಕೆ ಮಾಡಲಾಗಿದೆ.
ಸಕಾಳ ಪೇಪರ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರತಾಪ್ ಜಿ. ಪವಾರ್, ಜಾಗರಣ್ ಪ್ರಕಾಶನ ಲಿಮಿಟೆಡ್‌ನ ಶೈಲೇಶ್ ಗುಪ್ತಾ, ಎಚ್.ಟಿ. ಮೀಡಿಯಾ ಲಿಮಿಟೆಡ್‌ನ ಪ್ರವೀಣ್ ಸೋಮೇಶ್ವರ್, ಎಬಿಪಿ ಪ್ರೈವೇಟ್ ಲಿಮಿಟೆಡ್‌ನ ಧ್ರುವ ಮುಖರ್ಜಿ, ಡಿ.ಬಿ. ಕಾರ್ಪ್ ಲಿಮಿಟೆಡ್‌ನ ಗಿರೀಶ್ ಅಗರ್ವಾಲ್ ಅವರು ಎಬಿಸಿ ಆಡಳಿತ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.