ಪಟ್ನಾ: ಬಿಹಾರದಲ್ಲಿ ಕೇವಲ 40 ಸ್ಥಾನಗಳನ್ನು ಗಳಿಸಿರುವವರು ಮುಖ್ಯಮಂತ್ರಿ ಆಗುವುದು ಹೇಗೆ ಸಾಧ್ಯವೆಂದು ನಿತೀಶ್ ಕುಮಾರ್ ವಿರುದ್ಧ ಆರ್‌ಜೆಡಿ ನಾಯಕ ಮನೋಜ್ ಝಾ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, 'ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳನ್ನು ಗಳಿಸಿರುವವರು ಮುಖ್ಯಮಂತ್ರಿ ಆಗುವುದು ಹೇಗೆ ಸಾಧ್ಯ? ಜನರ ಆದೇಶವು ಅವರ ವಿರುದ್ಧವಾಗಿದೆ. ಈಗ ಯಾರು ಮುಖ್ಯಮಂತ್ರಿ ಆಗಬೇಕು ಅನ್ನುವುದನ್ನು ಜನರು ನಿರ್ಧರಿಸಬೇಕಿದೆ. ಈ ವಿಚಾರವಾಗಿ ಬಿಹಾರವು ಪರ್ಯಾಯವನ್ನು ಕಂಡುಕೊಳ್ಳಲಿದೆ ಮತ್ತು ಅದು ಸ್ವಯಂಪ್ರೇರಿತವಾಗಿರಲಿದೆ. ಇದು ಈಡೇರಲು ಒಂದು ವಾರ, ಹತ್ತು ದಿನ ಅಥವಾ ಒಂದು ತಿಂಗಳು ತೆಗೆದುಕೊಳ್ಳಬಹುದು' ಎಂದು ಝಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'2017ರಲ್ಲಿ ಮಹಾಗಠಬಂಧನದಿಂದ ಹೊರಹೋಗಿ ಎನ್‌ಡಿಎ ಜೊತೆ ಸೇರುವ ಮೂಲಕ ಜನರ ಆದೇಶವನ್ನು ನಿತೀಶ್ ಕುಮಾರ್ ದಿಕ್ಕರಿಸಿದರು. ಆದರೆ, ಬಿಹಾರದ ಜನರು ಈಗ ಎಚ್ಚರಗೊಂಡಿದ್ದಾರೆ' ಎಂದು ಮನೋಜ್ ಝಾ ತಿಳಿಸಿದ್ದಾರೆ.
'ಕೇವಲ 40 ಸ್ಥಾನಗಳನ್ನು ಹೊಂದಿರುವ ವ್ಯಕ್ತಿಯು ಮುಂದಿನ ಮುಖ್ಯಮಂತ್ರಿಯಾಗಲು ನೋಡುತ್ತಿದ್ದಾರೆ. ಅವರೀಗ ಬಿಜೆಪಿಯ ನಿಯಂತ್ರಣದಲ್ಲಿದ್ದಾರೆ. ಅದಕ್ಕೆ ಸ್ಕ್ರಿಪ್ಟ್ ಸಿದ್ದವಾಗಿದೆ. ನಿತೀಶ್ ಅವರಿಗೆ ಬೇರೆ ದಾರಿ ಇಲ್ಲ' ಎಂದು ಝಾ ಹೇಳಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (43) ಹಾಗೂ ಬಿಜೆಪಿ (74) ನೇತೃತ್ವದ ಎನ್‌ಡಿಎ ಒಟ್ಟು 125 ಕ್ಷೇತ್ರದಲ್ಲಿ ಜಯ ಸಾಧಿಸಿದೆ. ಆರ್‌ಜೆಡಿ 75 ಸ್ಥಾನಗಳಲ್ಲಿ ಗೆದ್ದಿದ್ದು, ಬಿಜೆಪಿ 74 ಕಡೆ ವಿಜಯ ಸಾಧಿಸಿದೆ. ಆರ್‌ಜೆಡಿ ನೇತೃತ್ವದ ಮಹಾಗಠಬಂಧನ 110 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಆದರೆ, 75 ಸ್ಥಾನಗಳಲ್ಲಿ ಗೆಲುವು ಪಡೆಯವ ಮೂಲಕ ಆರ್‌ಜೆಡಿಯು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.