ಆಗ್ರಾ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿ ಎರಡು ಗಂಟೆಗಳು ಮಾತ್ರ ಸಮಯ ಕಳೆಯಲಿದ್ದು, ಈ ಸಮಯವನ್ನು ಬಹಳ ಮಹತ್ವದ ಸಮಯ ಎಂದು ನಿರ್ಧರಿಸಿರುವ ಪಾಲಿಕೆ ಅಧಿಕಾರಿಗಳು ಇಡೀ ಆಗ್ರಾ ನಗರದ ಚಿತ್ರಣವನ್ನೇ ತಾತ್ಕಾಲಿಕವಾಗಿ ಬದಲಾಯಿಸಿದ್ದಾರೆ.
ಟ್ರಂಪ್ ಕಾರಿನಲ್ಲಿ ಚಲಿಸುವ ರಸ್ತೆಗಳು, ಇಳಿಯುವ ವಿಮಾನ ನಿಲ್ದಾಣದ ಸುತ್ತಲಿನ ಚಿತ್ರಣ ಎಲ್ಲವೂ ಹೊಸತರಂತೆ ಕಾಣಲು ಇನ್ನಿಲ್ಲದ ಆಸಕ್ತಿ ವಹಿಸಿ ಅಧಿಕಾರಿಗಳು ಬದಲಾಯಿಸಿದ್ದಾರೆ.
ಶನಿವಾರ ರಾತ್ರಿಯಿಂದ ಭಾನುವಾರದವರೆಗೂ ಆಗ್ರಾದ ಪ್ರತಿಯೊಂದು ರಸ್ತೆಯೂ ಈಗ ಸ್ವಚ್ಛವಾಗುತ್ತಿವೆ. ಫೆ.24ರಂದು ಭೇಟಿ ನೀಡಲಿರುವ ಟ್ರಂಪ್ ಹಾದು ಹೋಗುವ ರಸ್ತೆಗಳಂತೂ ಈಗ ಝಗಮಗಿಸುತ್ತಿವೆ.
ಈ ಸಂಬಂಧ ಆಗ್ರಾ ಪಾಲಿಕೆ ಅಧಿಕಾರಿ ಯೋಗೇಂದ್ರ ಕುಶ್ವಾಹ್, ಈಗ ಪ್ರತಾಪ್ ಪುರದಿಂದ ಖೇರಿಯಾ ವಿಮಾನನಿಲ್ದಾಣದವರೆಗಿನ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಇದು ಭಾನುವಾರದವರೆಗೂ ಮುಂದುವರಿಯಲಿದೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈಗಾಗಲೇ ಆಗ್ರಾದ ಎಲ್ಲಾ ರಸ್ತೆಗಳನ್ನೂ ವಿವಿಧ ರೀತಿಯ ತಳಿರು ತೋರಣಗಳಿಂದ ಅಲಂಕೃತಗೊಂಡಿವೆ. ದಾರಿಯುದ್ದಕ್ಕೂ ಅಧ್ಯಕ್ಷ ಟ್ರಂಪ್ ಹಾಗೂ ಪ್ರಧಾನಿ ಮೋದಿ ಇರುವ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಟ್ರಂಪ್ ಆಗ್ರಾ ಹಾಗೂ ಅಲ್ಲಿರುವ ವಿಶ್ವ ಪ್ರಸಿದ್ಧ ತಾಜ್ ಮಹಲ್‌ಗೆ ಭೇಟಿ ನೀಡಲಿದ್ದು, ಎರಡು ಗಂಟೆಗಳು ಮಾತ್ರ ಕಳೆಯಲಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ:ಟ್ರಂಪ್ ಭೇಟಿ: ಕೊಳೆಗೇರಿ ತೆರವಿಗೆ ಸೂಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.