ಕೊಚ್ಚಿ: ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿವೆ ಎಂಬ ಕಾರಣ ನೀಡಿ ರಸ್ತೆ ಬದಿಯಲ್ಲಿರುವ ಮರಗಳನ್ನು ಕತ್ತರಿಸುವಂತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಎಚ್ಚರ ವಹಿಸಬೇಕು ಎಂದು ಕೇರಳ ಹೈಕೋರ್ಟ್ ನಿರ್ದೇಶನ ನೀಡಿದೆ.
ಪಾಲಕ್ಕಾಡ್–ಪೊನ್ನಾನಿ ಮಾರ್ಗದಲ್ಲಿ ನಿರ್ಮಿಸಲಾಗಿರುವ ವಾಣಿಜ್ಯ ಕಟ್ಟಡಗಳ ಎದುರು ಇರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸುವ ಸಂದರ್ಭ ಈ ಆದೇಶ ಹೊರಬಿದ್ದಿದೆ.
ಹಾನಿಯಾಗಿದ್ದರೆ ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಪಾಯ ಉಂಟುಮಾಡುವ ಸ್ಥಿತಿಯಲ್ಲಿದ್ದರೆ ಮಾತ್ರ ಮರ ಕಡಿಯಬೇಕು. 2010ರಲ್ಲಿ ಸರ್ಕಾರದ ಆದೇಶದಂತೆ ರಚನೆಯಾಗಿರುವ ಸಮಿತಿಯು, ಸರ್ಕಾರಿ ಜಾಗಗಳಲ್ಲಿ ಬೆಳೆಯುವ ಮರಗಳನ್ನು ಕಡಿಯುವುದು ಹಾಗೂ ವಿಲೇವಾರಿ ಮಾಡುವುದನ್ನು ನಿಯಂತ್ರಿಸಬೇಕು ಎಂದು ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಹೇಳಿದ್ದಾರೆ.
'ಸಮಿತಿಯ ತೀರ್ಮಾನವಿಲ್ಲದೆ, ರಾಜ್ಯದ ರಸ್ತೆ ಬದಿಯಲ್ಲಿರುವ ಯಾವುದೇ ಮರವನ್ನು ಯಾವ ಆಡಳಿತವೂ ಕಡಿಯುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಮುಖ್ಯಕಾರ್ಯದರ್ಶಿಯವರು ಆದೇಶ ಹೊರಡಿಸಬೇಕು. ಮರಗಳು ನೆರಳು, ಶುದ್ಧ ಆಮ್ಲಜನಕ ಹಾಗೂ ಪ್ರಾಣಿ–ಪಕ್ಷಿಗಳಿಗೆ ಆಶ್ರಯ ನೀಡುತ್ತವೆ. ಸೂಕ್ತ ಕಾರಣಗಳಿಲ್ಲದಿದ್ದರೂ ಅವುಗಳನ್ನು ಕಡಿಯಲು ಅನುಮತಿ ನೀಡುವ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು' ಎಂದು ಕೋರ್ಟ್ ಮೇ 22ರಂದು ನೀಡಿದ ಆದೇಶದಲ್ಲಿ ಹೇಳಿದೆ.
ಕೊಂಬೆ ಬಾಗಿದ್ದಕ್ಕೆ ಮರ ಕಡಿಯಲು ಶಿಫಾರಸು
ವಾಣಿಜ್ಯ ಕಟ್ಟಡಗಳ ಎದುರಿನಲ್ಲಿರುವ ಮರಗಳಿಂದ ಸಾರ್ವಜನಿಕರು ಹಾಗೂ ಕಟ್ಟಡಗಳಿಗೆ ಅಪಾಯವಿದೆ ಎಂದು ಉಲ್ಲೇಖಿಸಿದ್ದ ಅರ್ಜಿದಾರರು, ಅವುಗಳನ್ನು ಕಡಿಯಲು ಅನುಮತಿ ಕೋರಿ ಲೋಕೋಪಯೋಗಿ ಇಲಾಖೆಗೆ (ಪಿಡಬ್ಲ್ಯುಡಿ) ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಅರಣ್ಯ ಇಲಾಖೆಗೆ ರವಾನಿಸಿದ್ದ ಪಿಡಬ್ಲ್ಯುಡಿ, ಕೊಂಬೆಗಳು ಅಪಾಯಕಾರಿ ಎನಿಸುವಷ್ಟು ಬಾಗಿದ್ದು, ಮರಗಳನ್ನು ಕತ್ತರಿಸಲು ಅನುಮತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು.
ಸ್ಥಳ ಪರಿಶೀಲನೆ ನಡೆಸಿದ ಪಾಲಕ್ಕಾಡ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮರಗಳಿಂದ ಯಾರಿಗೂ ಅಪಾಯವಿಲ್ಲ. ಅವುಗಳಲ್ಲಿ ಸಾಕಷ್ಟು ಪಕ್ಷಿಗಳು ಆಶ್ರಯ ಪಡೆದಿವೆ. ಮರಗಳನ್ನು ಕಡಿಯಲು ಸಾರ್ವಜನಿಕರ ವಿರೋಧವೂ ಇದೆ ಎಂದು ವರದಿ ನೀಡಿದ್ದರು.
ವಿಚಾರಣೆ ವೇಳೆ ಪಿಡಬ್ಲ್ಯುಡಿ ಶಿಫಾರಸಿನ ಬಗ್ಗೆ ಆಚ್ಚರಿ ವ್ಯಕ್ತಪಡಿಸಿದ ನ್ಯಾಯಾಲಯ, 'ಕೊಂಬೆಗಳು ಅಪಾಯಕಾರಿ ಮಟ್ಟದಲ್ಲಿ ವಾಲಿದ್ದರೆ, ಕೊಂಬೆಗಳನ್ನು ಕತ್ತರಿಸಲು ಶಿಫಾರಸು ಮಾಡಬಹುದೇ ವಿನಃ, ಮರಗಳನ್ನಲ್ಲ. ರಸ್ತೆಬದಿಯ ಮರಗಳನ್ನು ರಕ್ಷಿಸುವುದು ಪಿಡಬ್ಲ್ಯುಡಿ ಕರ್ತವ್ಯ. ವಾಣಿಜ್ಯ ಕಟ್ಟಡಗಳನ್ನು ರಕ್ಷಿಸಲು ಹಾಗೂ ಅಲ್ಲಿನ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಡಲು ಮರಗಳನ್ನು ಕತ್ತರಿಸಲು ಸಾಧ್ಯವಿಲ್ಲ' ಎಂದು ಸ್ಪಷ್ಟವಾಗಿ ಹೇಳಿದೆ.
ಮರ ಕಡಿಯಲು ಅನುಮತಿ ಕೋರಿದ್ದ ಅರ್ಜಿದಾರರ ಮನವಿಗೆ ಪಿಡಬ್ಲ್ಯುಡಿ ಸಮ್ಮತಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳ ಕಡೆಯಿಂದ ಕರ್ತವ್ಯಲೋಪವಾಗಿದ್ದರೆ, ಕ್ರಮಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.