ಹೈದರಾಬಾದ್: ರೈತರ ಪ್ರತಿಭಟನೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಬಿಜೆಪಿ ಸಂಸದೆ ಕಂಗನಾ ರನೌತ್ ಅವರು ಸಂಸತ್ತಿನಲ್ಲಿರಲು ಅರ್ಹರಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ಆಕೆಯು (ರನೌತ್) ಒಬ್ಬ ಮಹಿಳೆ. ನಾನು ಆಕೆಯನ್ನು ಗೌರವಿಸುತ್ತೇನೆ. ಆದರೆ, ಅವರು ಸಂಸತ್ತಿನಲ್ಲಿರಲು ಅರ್ಹಳಲ್ಲ ಎಂದು ನಾನು ಭಾವಿಸುತ್ತೇನೆ. ಅವಿದ್ಯಾವಂತೆಯಾಗಿರುವ ಆಕೆ ಜನರ ಬಗ್ಗೆ ಯೋಚಿಸುವುದಿಲ್ಲ. ಬದಲಾಗಿ ಆಕೆ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾಳೆ. ಸಾಧ್ಯವಾದರೆ ದೇಶದ ಮಹಿಳೆಯರು, ಮಹಿಳಾ ಸುರಕ್ಷತೆಯ ಬಗ್ಗೆ ಗಮನ ಹರಿಸುವಂತೆ ಅವರಲ್ಲಿ ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ದೇಶದ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈಚೆಗೆ ಹಿಂದಿ ದಿನಪತ್ರಿಕೆ ‘ದೈನಿಕ್ ಭಾಸ್ಕರ್’ಗೆ ತಾವು ನೀಡಿದ ಸಂದರ್ಶನದ ತುಣುಕೊಂದನ್ನು ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಕಂಗನಾ ಹಂಚಿಕೊಂಡಿದ್ದರು. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ‘ಶವಗಳು ನೇತಾಡುತ್ತಿದ್ದವು, ಅತ್ಯಾಚಾರಗಳು ನಡೆಯುತ್ತಿದ್ದವು’ ಎಂದು ಕೂಡ ಕಂಗನಾ ಆರೋಪಿಸಿದ್ದರು. ಅಲ್ಲದೆ, ‘ಪಿತೂರಿ’ಯಲ್ಲಿ ಚೀನಾ ಮತ್ತು ಅಮೆರಿಕದ ಪಾತ್ರವೂ ಇತ್ತು ಎಂದು ಅವರು ಹೇಳಿದ್ದರು.
ಕಂಗನಾ ಹೇಳಿಕೆಯಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಕಂಗನಾ ಅವರು ಆಡಿರುವ ಮಾತುಗಳು ಪಕ್ಷದ ಅಭಿಪ್ರಾಯ ಅಲ್ಲ. ಕಂಗನಾ ಆಡಿರುವ ಮಾತುಗಳ ವಿಚಾರವಾಗಿ ಪಕ್ಷವು ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಿದೆ ಎಂದು ಬಿಜೆಪಿ ಹೇಳಿಕೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.