ನವದೆಹಲಿ: ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ಹೊಂದುವ ಮೂಲಕ ಸಕ್ರಿಯ ರಾಜಕಾರಣಪ್ರವೇಶಿಸಿರುವ ಬೆನ್ನಲೇ, ಪ್ರಿಯಾಂಕಾ ಪತಿ ರಾಬರ್ಟ್ ವಾದ್ರಾ(49) ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳ ಮೂಲಕ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ.
‘ಇಷ್ಟು ವರ್ಷಗಳ ಅನುಭವ ಹಾಗೂ ಕಲಿಕೆಯನ್ನು ವ್ಯರ್ಥವಾಗಲು ಬಿಡಲಾಗದು, ಅದನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲೇಬೇಕು...ನನ್ನ ಮೇಲಿನ ಎಲ್ಲ ಆರೋಪಗಳು ಹಾಗೂ ಅಪವಾದಗಳು ಮುಗಿದ ಬಳಕ, ಜನರ ಸೇವೆಯಲ್ಲಿ ನಾನು ಬಹುವಾಗಿ ತೊಡಗಿಸಿಕೊಳ್ಳಬೇಕೆಂದು ಅನಿಸಿದೆ’ ಎಂದು ರಾಬರ್ಟ್ ವಾದ್ರಾ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಮಕ್ಕಳೊಂದಿಗೆ ಕಳೆಯುತ್ತಿರುವ ಕ್ಷಣಗಳು, ಮಕ್ಕಳಿಗೆ ಊಟ ಬಡಿಸುತ್ತಿರುವುದು, ಚಳಿಯಲ್ಲಿ ನಡುಗುತ್ತಿರುವ ಬಡ ಜನರಿಗೆ ಕಂಬಳಿ ನೀಡುತ್ತಿರುವುದು,...ಹೀಗೆ ತಾನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ಹಲವು ಫೋಟೊಗಳನ್ನು ಸಹ ಪೋಸ್ಟ್‌ನೊಂದಿಗೆ ಪ್ರಕಟಿಸಿಕೊಂಡಿದ್ದಾರೆ.
‘ದೇಶದ ಹಲವು ಭಾಗಗಳಲ್ಲಿ ಬಹಳಷ್ಟು ವರ್ಷ, ತಿಂಗಳು ಪ್ರಚಾರ ಕಾರ್ಯಗಳಲ್ಲಿ ಹಾಗೂ ಇತರೆ ಕಾರ್ಯಗಳಲ್ಲಿ ಕಳೆದಿದ್ದೇನೆ. ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶಲ್ಲಿ ಜನರಿಗೆ ಇನ್ನೂ ಹೆಚ್ಚಿನದನ್ನು ಮಾಡಬೇಡಿಕಿದೆ ಹಾಗೂ ನನ್ನಿಂದಾಗುವ ಸಣ್ಣ ಬದಲಾವಣೆಗಳನ್ನು ತರಬೇಕು ಎಂಬ ಭಾವನೆ ಮೂಡಿದೆ. ಇಲ್ಲಿನ ಜನರು ನನ್ನ ಗುರುತು ಸಿಗುತ್ತಿದ್ದಂತೆ, ಮುಕ್ತವಾದ ಪ್ರೀತಿ, ಗೌರವಗಳನ್ನು ನೀಡಿದ್ದಾರೆ’ ಎಂದಿದ್ದಾರೆ.
‘ಅಕ್ರಮ ಹಣ ವರ್ಗಾವಣೆ ಹಾಗೂ ಭೂಕಬಳಿಕೆಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಹಲವು ಬಾರಿ ವಾದ್ರಾ ಅವರನ್ನು ವಿಚಾರಣೆಗೆ ಒಳಪಡಿಸಿದೆ. ದೇಶಕ್ಕೆ ಎದುರಾಗಿರುವ ಪ್ರಮುಖ ಸಮಸ್ಯೆಗಳಿಂದ ಗಮನ ಬೇರೆಡೆಗೆ ಸೆಳೆಯಲು ಸರ್ಕಾರವು ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದೆ. ದೆಹಲಿ ಮತ್ತು ರಾಜಾಸ್ಥಾನದಲ್ಲಿ ಜಾರಿ ನಿರ್ದೇಶನಾಲಯಗಳಿಗೆ ನಾನು 8 ಬಾರಿ ಹಲವು ಗಂಟೆಗಳ ಭೇಟಿ ನೀಡಿದ್ದೇನೆ. ಏಕೆಂದರೆ, ನಾನು ನಿಯಮಗಳಿಗೆ ಬದ್ಧನಾಗಿದ್ದೇನೆ ಹಾಗೂ ಕಾನೂನಿಗಿಂತ ದೊಡ್ಡವನಲ್ಲಎಂಬುದು ತಿಳಿದಿದೆ. ನನಗೆ ಎದುರಾಗುವ ಪ್ರತಿಯೊಂದು ಘಟನೆಗಳಿಂದಲೂ ಕಲಿಯುವ ವ್ಯಕ್ತಿಯಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಜನವರಿ 23ರಂದು ಪ್ರಿಯಾಂಕಾ ಗಾಂಧಿ ಕಾಂಗ್ರೆಸ್‌ನ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ಉತ್ತರ ಪ್ರದೇಶ, ಅದರಲ್ಲಿಯೂ ಇಲ್ಲಿನ ಪೂರ್ವ ಭಾಗದಲ್ಲಿ ಕಾಂಗ್ರೆಸ್‌ನ್ನು ಪುನರ್‌ಸ್ಥಾಪಿಸುವ ಗುರುತರ ಹೊಣೆಯನ್ನು ಕಾಂಗ್ರೆಸ್ ಪ್ರಿಯಾಂಕಾಗೆ ನೀಡಿದೆ.
ಗಾಂಧಿ ಕುಟುಂಬಕ್ಕೆ ಅಮೇಠಿ ಮತ್ತು ರಾಯ್‌ಬರೇಲಿಭದ್ರ ಕೋಟೆಯಾಗಿದ್ದು, ವಾದ್ರಾ ಜನಸೇವೆ ಹೆಸರಿನಲ್ಲಿ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೂಲಗಳ ಪ್ರಕಾರ, ವಾದ್ರಾ ದಶಕದ ಹಿಂದೆಯೇ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದರು. ಆದರೆ, ಆಗ ಅದಕ್ಕೆ ತಡೆಬಿದ್ದಿತ್ತು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.