ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರು ‘ನವೀಕರಣ ಮಾಡಿ ವಾಸ್ತವ್ಯ’ ಹೂಡಿದ್ದ ಲಂಡನ್‌ನಲ್ಲಿರುವ ಆಸ್ತಿ, ‘ಅಪರಾಧ ಕೃತ್ಯದಿಂದ ದೊರೆತದ್ದು’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ.
ಭಾರತದಲ್ಲಿ ಹಣ ಅಕ್ರಮ ವರ್ಗಾವಣೆ ಹಾಗೂ ತೆರಿಗೆ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಶಸ್ತ್ರಾಸ್ತ ವ್ಯವಹಾರಗಳ ಸಲಹೆಗಾರ ಮತ್ತು ಮಧ್ಯವರ್ತಿ ಸಂಜಯ್ ಭಂಡಾರಿ ಅವರಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ವಾದ್ರಾ ಅವರ ಹೆಸರು ಹೇಳಿರುವುದು ಇದೇ ಮೊದಲು.
ಬ್ರಿಟನ್‌ನಲ್ಲಿ ಬೇನಾಮಿ ಆಸ್ತಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ ಯುಎಇಯಲ್ಲಿ ನೆಲೆಸಿರುವ ಎನ್‌ಆರ್‌ಐ ಉದ್ಯಮಿ ಸಿ.ಸಿ ತಂಬಿ ಮತ್ತು ಬ್ರಿಟನ್ ಪ್ರಜೆ ಸುಮಿತ್ ಚಡ್ಡಾ ಅವರ ವಿರುದ್ಧ ಹೊಸ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಇ.ಡಿ ಪ್ರಕಟಣೆ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಿ ಅವರನ್ನು ಇ.ಡಿ ಅಧಿಕಾರಿಗಳು 2020ರ ಜನವರಿಯಲ್ಲಿ ಬಂಧಿಸಿದ್ದರು. ಇದೀಗ ಅವರು ಜಾಮೀನು ಪಡೆದು ಹೊರಬಂದಿದ್ದಾರೆ.
‘ಸಂಜಯ್ ಭಂಡಾರಿ ಅವರು ಲಂಡನ್‌ನ ನಂ.12 ಬ್ರಯನ್‌ಸ್ಟನ್ ಸ್ಕ್ವೇರ್ ಮತ್ತು ನಂ. 6 ಗ್ರೋವ್ನರ್ ಹಿಲ್ ಕೋರ್ಟ್‌ನಲ್ಲಿರುವ ಆಸ್ತಿ ಸೇರಿದಂತೆ ಬಹಿರಂಗಪಡಿಸದೇ ಇರುವ ಇನ್ನಷ್ಟು ಆಸ್ತಿಗಳನ್ನು ವಿದೇಶದಲ್ಲಿ ಹೊಂದಿದ್ದಾರೆ’ ಎಂದು ಆರೋಪಪಟ್ಟಿಯಲ್ಲಿ ಹೇಳಿದೆ.
‘ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಈ ಆಸ್ತಿಗಳು ‘ಅಪರಾಧ ಕೃತ್ಯದಿಂದ ದೊರೆತದ್ದು’ ಆಗಿದೆ. ಸಿ.ಸಿ ತಂಬಿ ಮತ್ತು ಸುಮಿತ್ ಅವರು ಈ ಆಸ್ತಿಗಳನ್ನು ಬಳಸಿಕೊಂಡಿದ್ದರು’ ಎಂದಿದೆ.
‘ತಂಬಿ ಅವರು ವಾದ್ರಾ ಅವರ ನಿಕಟ ಸಹವರ್ತಿ ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ. ವಾದ್ರಾ ಅವರು ನಂ.12 ಬ್ರಯನ್‌ಸ್ಟನ್ ಸ್ಕ್ವೇರ್‌ನಲ್ಲಿರುವ ಆಸ್ತಿಯನ್ನು ನವೀಕರಣ ಮಾಡಿದ್ದು ಮಾತ್ರವಲ್ಲದೆ, ಅಲ್ಲಿ ವಾಸ್ತವ್ಯ ಮಾಡಿದ್ದರು’ ಎಂದು ಹೇಳಿದೆ.
‘ವಾದ್ರಾ ಮತ್ತು ತಂಬಿ ಅವರು ಫರೀದಾಬಾದ್ (ದೆಹಲಿ ಸಮೀಪ) ಬಳಿ ಪಾಲುದಾರಿಕೆಯಲ್ಲಿ ದೊಡ್ಡ ಪ್ರಮಾಣದ ಭೂಮಿ ಖರೀದಿಸಿದ್ದಾರೆ. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ನಡೆದಿದೆ’ ಎಂದಿದೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ, ರಾಬರ್ಟ್ ವಾದ್ರಾ ಅವರನ್ನು ಇ.ಡಿ ಇದೇ ಪ್ರಕರಣಕ್ಕೆ ಸಂಬಂಧಿಸಿಂದಂತೆ ಈ ಹಿಂದೆ ವಿಚಾರಣೆ ನಡೆಸಿತ್ತು. ಆದರೆ ಅವರು ಎಲ್ಲ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.