ADVERTISEMENT

ಕಿಡ್ನಿ ದಾನ ಮಾಡಿದ ಲಾಲು ಪುತ್ರಿಗೆ ಬಿಜೆಪಿ ನಾಯಕರಿಂದ ಪ್ರಶಂಸೆಗಳ ಮಹಾಪೂರ

ನನಗ್ಯಾಕೆ ಹೆಣ್ಣು ಮಗಳನ್ನು ಕೊಟ್ಟಿಲ್ಲ ಎಂದು ದೇವರೊಂದಿಗೆ ಜಗಳವಾಡುವೆ ಎಂದ ಬಿಜೆಪಿ ನಾಯಕ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2022, 13:18 IST
Last Updated 6 ಡಿಸೆಂಬರ್ 2022, 13:18 IST
ಲಾಲು  ಹಾಗೂ ಪುತ್ರಿ ರೋಹಿಣಿ
ಲಾಲು ಹಾಗೂ ಪುತ್ರಿ ರೋಹಿಣಿ   

ನವದೆಹಲಿ: ತಂದೆಗೆ ಮೂತ್ರಪಿಂಡ ದಾನ ಮಾಡಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪ‍್ರಸಾದ್‌ಅವರ ಪುತ್ರಿ ರೋಹಿಣಿ ಆಚಾರ್ಯ ಅವರಿಗೆ ಬಿಜೆಪಿ ನಾಯಕರಿಂದ ಪ್ರಶಂಸೆಯ ಮಹಾಪೂರವೇ ಹರಿದು ಬಂದಿದೆ.

ಲಾಲುಅವರ ರಾಜಕೀಯ ವಿರೋಧಿಗಳೇ, ರೋಹಿಣಿಆಚಾರ್ಯ ಅವರನ್ನು ಪ್ರಶಂಸಿಸಿ ಟ್ವೀಟ್‌ ಮಾಡಿದ್ದಾರೆ.

‘ರೋಹಿಣಿ ಅವರು ಮೂತ್ರಪಿಂಡ ದಾನ ಮಾಡುವ ಮೂಲಕ, ಮಾದರಿಯಾಗಿದ್ದಾರೆ‘ ಎಂದು ಲಾಲು ಪ್ರಸಾದ್‌ಅವರ ತೀಕ್ಷ್ಣ ಟೀಕಾಕಾರ, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೊಗಳಿದ್ದಾರೆ.

ADVERTISEMENT

‘ರೋಹಿಣಿ ಆಚಾರ್ಯ ಒಬ್ಬರು ಮಾದರಿ ಪುತ್ರಿ. ಅವರ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ನಡೆದುಕೊಂಡಿದ್ದೀರಿ‘ ಎಂದು ಗಿರಿರಾಜ್‌ ಸಿಂಗ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ಕೂಡ ಲಾಲು ಪುತ್ರಿಯನ್ನು ಹೊಗಳಿದ್ದು, ‘ನನಗೆ ಮಗಳಿಲ್ಲ. ಇವತ್ತು ನಾನು ರೋಹಿಣಿಯನ್ನು ನೋಡಿದ ಬಳಿಕ, ನನಗ್ಯಾಕೆ ಹೆಣ್ಣು ಮಗುವನ್ನು ನೀಡಿಲ್ಲ ಎಂದು ದೇವರೊಂದಿಗೆ ಜಗಳವಾಡುತ್ತೇನೆ‘ ಎಂದು ಭಾವುಕವಾಗಿ ಟ್ವೀಟ್‌ ಮಾಡಿದ್ದಾರೆ.

ಲಾಲು ಅವರ ಹಿರಿಯ ಪುತ್ರಿ ಮೀಸಾ ಭಾರತಿ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೊ ಹಾಗೂ ಫೋಟೋಗಳನ್ನು ಅಪ್ಲೋಡ್‌ ಮಾಡಿದ್ದಾರೆ.

ಸಿಂಗಪುರ ಆಸ್ಪತ್ರೆಯಲ್ಲಿ ತಮ್ಮ ತಂದೆ ಲಾಲು ಪ್ರಸಾದ್ ಯಾದವ್ ಅವರಿಗೆ ನಡೆದ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ಅವರ ಮಗ, ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಸೋಮವಾರ ಹೇಳಿದ್ದರು.

ನನ್ನ ತಂದೆ ಮತ್ತು ಅವರಿಗೆ ಮೂತ್ರಪಿಂಡ ದಾನ ಮಾಡಿದ ಅಕ್ಕ ರೋಹಿಣಿ ಆಚಾರ್ಯ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತೇಜಸ್ವಿ ತಿಳಿಸಿದ್ದರು.

‘ಯಶಸ್ವಿ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆ ಬಳಿಕ ಅಪ್ಪನನ್ನು ಆಪರೇಶನ್ ಥಿಯೇಟರ್‌ನಿಂದ ಐಸಿಯುಗೆ ಸ್ಥಳಾಂತರಿಸಲಾಗಿದೆ. ಕಿಡ್ನಿ ದಾನ ಮಾಡಿದ ನನ್ನ ಅಕ್ಕ ರೋಹಿಣಿ ಆಚಾರ್ಯ ಮತ್ತು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಲೂಲೂ ಪ್ರಸಾದ್ಅವರು ಆರೋಗ್ಯವಾಗಿದ್ದಾರೆ. ಅವರಿಗಾಗಿ ಪ್ರಾರ್ಥಿಸಿದ ಮತ್ತು ಹಾರೈಸಿದ ಎಲ್ಲರಿಗೂ ಧನ್ಯವಾದ’ ಎಂದು ತೇಜಸ್ವಿ ಯಾದವ್ ಹೇಳಿದ್ದರು.

ಮೇವು ಹಗರಣದ ಹಲವು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಲಾಲು ಪ್ರಸಾದ್ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ನ್ಯಾಯಾಲಯವು ಜಾಮೀನು ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.