ADVERTISEMENT

ಚುನಾವಣಾ ಆಯುಕ್ತರ ನೇಮಕ: ADRನಿಂದ ಅರ್ಜಿ- ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಾಳೆ

ಪಿಟಿಐ
Published 13 ಮಾರ್ಚ್ 2024, 15:47 IST
Last Updated 13 ಮಾರ್ಚ್ 2024, 15:47 IST
.
.   

ನವದೆಹಲಿ: ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು (ಸಿಜೆಐ) ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇದೇ 15ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಬುಧವಾರ ಸಮ್ಮತಿಸಿದೆ.

ಅಸೋಸಿಯೇಷನ್ ಫಾರ್‌ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್‌) ಸ್ವಯಂ ಸೇವಾ ಸಂಸ್ಥೆಯು ಈ ಅರ್ಜಿ ಸಲ್ಲಿಸಿದ್ದು, ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ರಾಜಕೀಯ ಮತ್ತು ಆಡಳಿತಾತ್ಮಕ ಹಸ್ತಕ್ಷೇಪಗಳಿಂದ ಚುನಾವಣಾ ಆಯೋಗವನ್ನು ದೂರವಿರಿಸಬೇಕು ಎಂದು ಕೋರಿದೆ. 

ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಎಡಿಆರ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಪ್ರಶಾಂತ್‌ ಭೂಷಣ್‌ ಅವರು, ನ್ಯಾಯಮೂರ್ತಿ ಸಂಜೀವ್‌ ಖನ್ನಾ ನೇತೃತ್ವದ ನ್ಯಾಯಪೀಠಕ್ಕೆ ಮನವಿ ಮಾಡಿದರು. ‘ಅರ್ಜಿಯನ್ನು ಇದೇ 15ರಂದು ವಿಚಾರಣೆಗೆ ಪಟ್ಟಿ ಮಾಡಲು ಮುಖ್ಯ ನ್ಯಾಯಮೂರ್ತಿಗಳಿಂದ ಸಂದೇಶ ಬಂದಿದೆ’ ಎಂದು ಖನ್ನಾ ಅವರು ತಿಳಿಸಿದರು.

ADVERTISEMENT

ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಟ್ಟಿರುವ 2023ರ ತಿದ್ದುಪಡಿ ಕಾಯ್ದೆಯ ಸಿಂಧುತ್ವವನ್ನೂ ಎಡಿಆರ್‌ ಅರ್ಜಿಯಲ್ಲಿ ಪ್ರಶ್ನಿಸಿದೆ.

ಹೊಸ ಕಾನೂನಿನ ಪ್ರಕಾರ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ವಿರೋಧ ಪಕ್ಷದ ನಾಯಕ ಹಾಗೂ ಪ್ರಧಾನಿ ನಾಮನಿರ್ದೇಶನ ಮಾಡಿರುವ ಕೇಂದ್ರ ಸಚಿವರೊಬ್ಬರು ಇರಲಿದ್ದಾರೆ.

ಚುನಾವಣಾ ಆಯುಕ್ತ ಅರುಣ್ ಗೋಯಲ್‌ ಅವರು ರಾಜೀನಾಮೆ ನೀಡಿದ ಬಳಿಕ ಎಡಿಆರ್‌ ಸಂಸ್ಥೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.

‘ಅನೂಪ್‌ ಬರನ್‌ವಾಲ್‌ ವರ್ಸಸ್‌ ಕೇಂದ್ರ ಸರ್ಕಾರದ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್‌ ನೀಡಿರುವ ತೀರ್ಪಿನ ಅನುಸಾರವೇ ಆಯುಕ್ತರನ್ನು ನೇಮಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಚುನಾವಣಾ ಪ್ರಕ್ರಿಯೆಯು ನ್ಯಾಯಬದ್ಧವಾಗಿ ನಡೆಯಲು ಪ್ರಧಾನಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸಿಜೆಐ ಅವರನ್ನೊಳಗೊಂಡ ಸಮಿತಿಯ ಶಿಫಾರಸಿನಂತೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡಬೇಕು ಎಂದು 2023 ಮಾರ್ಚ್‌ 2ರಂದು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವು ತೀರ್ಪು ನೀಡಿತ್ತು.

ಈ ತೀರ್ಪನ್ನು ಕೇಂದ್ರ ಸರ್ಕಾರವು ತಳ್ಳಿಹಾಕಿದೆ ಎಂದೂ ಎಡಿಆರ್‌ ಸಂಸ್ಥೆಯು ಅರ್ಜಿಯಲ್ಲಿ ಆರೋಪಿಸಿದೆ. ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿರುವ ಹೊಸ ಕಾನೂನು 2024 ಜನವರಿ 2ರಿಂದ ಜಾರಿಗೆ ಬಂದಿದೆ.

ಕೇಂದ್ರ ಸರ್ಕಾರವು ಹೊಸ ಕಾನೂನಿನ ಪ್ರಕಾರ ನೂತನ ಚುನಾವಣಾಧಿಕಾರಿಯನ್ನು ನೇಮಕ ಮಾಡದಂತೆ ತಡೆಯಬೇಕೆಂದು ಕೋರಿ ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕಿ ಜಯಾ ಠಾಕೂರ್ ಅವರು ಸುಪ್ರೀಂ ಕೋರ್ಟ್‌ಗೆ ಈಚೆಗೆ ಅರ್ಜಿ ಸಲ್ಲಿಸಿದ್ದರು.

ಇ.ಸಿ: ಮಾಹಿತಿ ಕೋರಿದ ಚೌಧರಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಇಬ್ಬರು ಚುನಾವಣಾ ಆಯುಕ್ತರ ನೇಮಕಕ್ಕಾಗಿ ಗುರುವಾರ ಸಭೆ ಸೇರಲಿದೆ. ಈ ನಡುವೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಕಾಂಗ್ರೆಸ್ಸಿನ ಅಧೀರ್ ರಂಜನ್ ಚೌಧರಿ ಅವರು ಚುನಾವಣಾ ಆಯುಕ್ತರ ಸ್ಥಾನಕ್ಕೆ ಶೋಧ ಸಮಿತಿಯು ಅಂತಿಮಗೊಳಿಸಿರುವವರ ವಿವರವನ್ನು ತಮಗೆ ನೀಡಬೇಕು ಎಂದು ಸರ್ಕಾರವನ್ನು ಕೋರಿದ್ದಾರೆ. ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಆಗಿರುವ ಕಾರಣದಿಂದಾಗಿ ಚೌಧರಿ ಅವರು ಸಮಿತಿಯ ಸದಸ್ಯರಾಗಿದ್ದಾರೆ. ಶಾಸನ ರಚನಾ ಇಲಾಖೆಯ ಕಾರ್ಯದರ್ಶಿ ರಾಜೀವ್ ಮಣಿ ಅವರಿಗೆ ಪತ್ರ ಬರೆದಿರುವ ಚೌಧರಿ ಅವರು ಚುನಾವಣಾ ಆಯುಕ್ತರ ಹುದ್ದೆಗೆ ಪರಿಗಣಿಸಬೇಕಿರುವವರ ಕುರಿತು ವಿವರಗಳನ್ನು ಒದಗಿಸುವಂತೆ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ. ಮುಖ್ಯ ಮಾಹಿತಿ ಆಯುಕ್ತ ಮಾಹಿತಿ ಆಯುಕ್ತರ ನೇಮಕದ ವಿಚಾರದಲ್ಲಿ ಪ್ರಕ್ರಿಯೆಗಳನ್ನು ಪಾಲಿಸಬೇಕು ಎಂದು ಕೂಡ ಅವರು ಕಾನೂನು ಸಚಿವಾಲಯವನ್ನು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.