ADVERTISEMENT

ಕೇರಳ: ದಲಿತ ನಾಯಕನಿಗೆ ದೇವಸ್ವಂ ಖಾತೆ

ದಲಿತ ಸಮುದಾಯದ ಅಸಮಾಧಾನ: ಸಿಪಿಎಂ ಕಾರ್ಯಕರ್ತರ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 20 ಮೇ 2021, 15:37 IST
Last Updated 20 ಮೇ 2021, 15:37 IST

ತಿರುವನಂತಪುರ: ಪಿಣರಾಯಿ ವಿಜಯನ್‌ ಅವರ ನೂತನ ಸರ್ಕಾರದಲ್ಲಿ ದೇವಸ್ವಂ (ಮುಜರಾಯಿ) ಖಾತೆಯನ್ನು ಸಿಪಿಎಂ ಹಿರಿಯ ಸದಸ್ಯ ಮತ್ತು ದಲಿತ ನಾಯಕ ಕೆ. ರಾಧಾಕೃಷ್ಣನ್‌ ಅವರಿಗೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದು ರಾಜಕೀಯ ಸಂದೇಶ ರವಾನಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿಪಿಎಂ ಕಾರ್ಯಕರ್ತರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಹಿರಿಯ ನಾಯಕನನ್ನು ಕಡೆಗಣಿಸಲಾಗಿದೆ ಮತ್ತು ತಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ದಲಿತ ಸಮುದಾಯ ಅಸಮಾಧಾನ ವ್ಯಕ್ತಪಡಿಸಿದೆ.

ಕೇರಳದಲ್ಲಿ ಸುಮಾರು 40 ವರ್ಷಗಳ ಬಳಿಕ ದಲಿತ ಸಮುದಾಯದ ವ್ಯಕ್ತಿಗೆ ದೇವಸ್ವಂ ಖಾತೆ ನೀಡಲಾಗಿದೆ. 1980–81ರ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಸಿಪಿಎಂ ಪಕ್ಷದ ಎಂ.ಕೆ. ಕೃಷ್ಣನ್‌ ಅವರು ದೇವಸ್ವಂ ಸಚಿವರಾಗಿದ್ದರು. ಇದಕ್ಕಿಂತ ಮೊದಲು ದಲಿತ ಸಮುದಾಯದ ಮೂವರು ಕಾಂಗ್ರೆಸ್‌ ಸಚಿವರಿಗೆ ದೇವಸ್ವಂ ಖಾತೆ ನೀಡಲಾಗಿತ್ತು.

ADVERTISEMENT

ಅರ್ಥಶಾಸ್ತ್ರದಲ್ಲಿ ಪದವೀಧರರಾಗಿರುವ ರಾಧಾಕೃಷ್ಣ ಅವರು ಸಿಪಿಎಂ ಕೇಂದ್ರೀಯ ಸಮಿತಿಯ ಸದಸ್ಯರಾಗಿದ್ದಾರೆ. ಜತೆಗೆ, ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು ಹಿಂದೆಸ್ಪೀಕರ್‌, ಸಚಿವರಾಗಿಯೂ ಕಾರ್ಯನಿರ್ವಹಿಸಿ ದ್ದಾರೆ. ವಿರೋಧಿ ಬಣಗಳ ಹಿಂದೂತ್ವ ಕಾರ್ಯಸೂಚಿಗೆ ಸವಾಲು ಹಾಕಲು ಇಂತಹ ಹಿರಿಯ ನಾಯಕನಿಗೆ ದೇವಸ್ವಂ ಖಾತೆ ನೀಡಲಾಗಿದೆಯೇ ಹೊರತು ದಲಿತ ಸಮುದಾಯದ ಕಾಳಜಿಯಿಂದ ಅಲ್ಲ ಎಂದು ದಲಿತ ಸಮುದಾಯದ ಕೆಲವು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ, ಎಲ್‌ಡಿಎಫ್‌ ಸರ್ಕಾರ ತನ್ನ ಪ್ರಗತಿಪರ ಚಿಂತನೆಯನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಸಿಪಿಎಂ ಕಾರ್ಯಕರ್ತರು ಪ್ರತಿಪಾದಿಸಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ವಿವಾದ ಹಿನ್ನೆಲೆಯಲ್ಲಿ ಇದು ಮಹತ್ವದ ಬೆಳವಣಿಗೆ ಎಂದು ಅವರು ಹೇಳಿದ್ದಾರೆ.

’ನಿಜವಾದ ಕಾಳಜಿ ಇದ್ದರೆ ದಲಿತ ಸಮುದಾಯದ ಇಬ್ಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕಾಗಿತ್ತು ಮತ್ತು ರಾಧಾಕೃಷ್ಣ ಅವರಿಗೆ ಮಹತ್ವದ ಖಾತೆಯನ್ನು ನೀಡಬೇಕಾಗಿತ್ತು’ ಎಂದು ಸಾಮಾಜಿಕ ಕಾರ್ಯಕರ್ತೆ ಧನ್ಯಾ ರಾಮನ್‌ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.