ಉಜ್ಜಯಿನಿ (ಮಧ್ಯಪ್ರದೇಶ): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರ ಹಾಗೂ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂಧೆ ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ವಿಚಾರ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ದೇವಾಲಯದ ಆಡಳಿತ ಮಂಡಳಿಯು ಅಧಿಕಾರಿಯೊಬ್ಬರನ್ನು ವಜಾ ಮಾಡಿದೆ.
ಗುರುವಾರ ಸಂಜೆ ದೇವಾಲಯಕ್ಕೆ ಬಂದಿದ್ದ ಶ್ರೀಕಾಂತ್ ಅವರಿಗೆ ಗರ್ಭಗುಡಿ ಪ್ರವೇಶಿಸಲು ನಿಯಮ ಉಲ್ಲಂಘಿಸಿ ಅವಕಾಶ ನೀಡಲಾಗಿತ್ತು. ಇದಕ್ಕೆ ಕಿಡಿಕಾರಿರುವ ಕಾಂಗ್ರೆಸ್, ಮಧ್ಯಪ್ರದೇಶ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
'ದರ್ಶನ ವ್ಯವಸ್ಥೆಯ ಉಸ್ತುವಾರಿ ವಿನೋದ್ ಚೌಕ್ಸೆ ಅವರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಲ್ಲಿ ವಜಾ ಮಾಡಲಾಗಿದೆ' ಎಂದು ದೇವಸ್ಥಾನದ ಆಡಳಿತಾಧಿಕಾರಿ ಗಣೇಶ್ ಧಾಕಡ್ ಶನಿವಾರ ತಿಳಿಸಿದ್ದಾರೆ.
'ಮೂವರು ಭದ್ರತಾ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ' ಎಂದೂ ತಿಳಿಸಿದ್ದಾರೆ.
ದೇಶದಲ್ಲಿರುವ 12 'ಜ್ಯೋತಿರ್ಲಿಂಗ' ಮಂದಿರಗಳಲ್ಲಿ ಮಹಾಕಾಳೇಶ್ವರ ದೇವಾಲಯವೂ ಒಂದಾಗಿದೆ.
ಸಾಮಾನ್ಯ ಭಕ್ತರು ಮಹಾಕಾಳೇಶ್ವರನ ದರ್ಶನಕ್ಕಾಗಿ ಉದ್ದನೆಯ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವ ಸ್ಥಿತಿ ಇದೆ. ಇಂತಹ ಹೊತ್ತಲ್ಲಿ, ಗರ್ಭಗುಡಿ ಪ್ರವೇಶಕ್ಕೆ ನಿಷೇಧವಿದ್ದರೂ, ವಿಐಪಿಗಳಿಗೆ ಅನುಮತಿ ನೀಡಲಾಗಿದೆ ಎಂದು ಕಾಂಗ್ರೆಸ್ ಶಾಸಕ ಮಹೇಶ್ ಪರ್ಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.