ADVERTISEMENT

ಕೇರಳ: ಮೋದಿ ರೋಡ್‌ ಶೋನಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯ ಕಡೆಗಣನೆ ಆರೋಪ

ಅರ್ಜುನ್ ರಘುನಾಥ್
Published 20 ಮಾರ್ಚ್ 2024, 4:34 IST
Last Updated 20 ಮಾರ್ಚ್ 2024, 4:34 IST
   

ತಿರುವನಂತಪುರ: ಕೇರಳದಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ರೋಡ್‌ ಶೊನಲ್ಲಿ ರಾಜ್ಯದ ಏಕೈಕ ಮುಸ್ಲಿಂ ಅಭ್ಯರ್ಥಿಯನ್ನು ಕಡೆಗಣಿಸಿದ್ದು ರಾಜಕೀಯ ಜಗಳಕ್ಕೆ ಕಾರಣವಾಗಿದೆ.

ಪಾಲಕ್ಕಾಡ್‌ನಲ್ಲಿ ಮಂಗಳವಾರ ನರೇಂದ್ರ ಮೋದಿಯವರು ನಡೆಸಿದ ರೋಡ್‌ ಶೋ ವಾಹನದಲ್ಲಿ, ಪಾಲಕ್ಕಾಡ್‌ ಹಾಗೂ ಪಕ್ಕದ ಪೊನ್ನಾನಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಇದ್ದರು. ಆದರೆ ಮಲಪ್ಪುರದ ಬಿಜೆಪಿ ಅಭ್ಯರ್ಥಿ ಅಬ್ದುಲ್ ಸಲಾಮ್ ಅವರು ಇರಲಿಲ್ಲ.

ಈ ಬಗ್ಗೆ ಸಿಪಿಎಂ ಹಿರಿಯ ನಾಯಕ ಎ.ಕೆ ಬಾಲನ್ ಹೇಳಿಕೆ ನೀಡಿದ್ದು, ‘ಮೋದಿಯವರ ರೋಡ್ ಶೋನಲ್ಲಿ ಅಬ್ದುಲ್ ಸಲಾಮ್ ಅವರನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ. ಇದು ಧಾರ್ಮಿಕ ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿಗೆ ಇರುವ ಧೋರಣೆಯ ಪ್ರತಿಬಿಂಬ’ ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬ್ದುಲ್ ಸಲಾಮ್, ‘ಪಾಲಕ್ಕಾಡ್‌ ಜಿಲ್ಲೆಗೂ ನನ್ನ ಕ್ಷೇತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ರೋಡ್‌ ಶೋ ವಾಹನದಲ್ಲಿ ನನಗೆ ಅವಕಾಶ ಇರಲಿಲ್ಲ. ಪೊನ್ನಾನಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ತೀರ್ಥಲ ವಿಧಾನಸಭಾ ಕ್ಷೇತ್ರ ಕೂಡ ಸೇರುತ್ತದೆ. ಹೀಗಾಗಿ ಪೊನ್ನಾನಿ ಅಭ್ಯರ್ಥಿ ನಿವೇದಿತಾ ಸುಬ್ರಮಣಿಯನ್ ಅವರು ರೋಡ್‌ ಶೋನಲ್ಲಿ ಪ್ರಧಾನಿ ಮೋದಿ ಜೊತೆಗೆ ಇದ್ದರು’ ಎಂದು ಹೇಳಿದ್ದಾರೆ.

ಅಲ್ಲದೆ ಪಾಲಕ್ಕಾಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು, ಮಲಪ್ಪುರಂಗೆ ಅಹ್ವಾನಿಸಿದ್ದೇನೆ ಎಂದು ಹೇಳಿದ್ದಾರೆ.

ಕ್ಯಾಲಿಕಟ್ ವಿಶ್ವವಿದ್ಯಾಲಯದ ಮಾಜಿ ಕುಲಪತಿಯಾಗಿರುವ ಸಲಾಮ್‌, ಈ ಹಿಂದೆ 2021ರ ವಿಧಾನನಭಾ ಚುನಾವಣೆಯಲ್ಲಿ ಮಲಪ್ಪುರಂ ಜಿಲ್ಲೆಯ ತಿರೂರ್‌ನಿಂದ ಸ್ಪರ್ಧಿಸಿ ಸೋತಿದ್ದರು. ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಶೇ 5ಕ್ಕೂ ಕಡಿಮೆ ಮತಗಳನ್ನು ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.