ADVERTISEMENT

ಜನ ಧನ ಖಾತೆಗಳ ಮೂಲಕ ₹ 25 ಲಕ್ಷ ಕೋಟಿ ಹಂಚಿಕೆ: ಕೇಂದ್ರ ಸಚಿವ

ಪಿಟಿಐ
Published 16 ಅಕ್ಟೋಬರ್ 2022, 14:49 IST
Last Updated 16 ಅಕ್ಟೋಬರ್ 2022, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಪ್ರಧಾನ ಮಂತ್ರಿ ಜನ ಧನ ಯೋಜನೆಗಳಮೂಲಕ ಹಲವು ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ಸುಮಾರು ₹ 25 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ. ಕಿಶನ್‌ ರೆಡ್ಡಿ ತಿಳಿಸಿದ್ದಾರೆ.

ತೆಲಂಗಾಣದ ಜನ್‌ಗಾಂ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಿಶನ್‌ ರೆಡ್ಡಿ, 50 ಕೋಟಿ ಜನ ಧನ ಖಾತೆಗಳ ಪೈಕಿ ಅರ್ಧದಷ್ಟು ಮಹಿಳೆಯರ ಖಾತೆಗಳಾಗಿವೆ ಎಂದರು.

ಜನ ಧನ ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿ ನಮ್ಮ ರಾಷ್ಟ್ರದಲ್ಲಿ ಇದರ ಅಗತ್ಯತೆ ಇದೆಯೇ ಎಂದೆಲ್ಲ ಪ್ರಶ್ನಿಸಲಾಗಿತ್ತು. ಆದರೆ ಇವತ್ತು ಹಲವು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರಿಗೆ ಜನ ಧನ ಖಾತೆಯಿಂದ ₹ 25 ಲಕ್ಷ ಕೋಟಿಯನ್ನು ಬಿಡುಗಡೆ ಮಾಡಿದ್ದೇವೆ. ಇದೊಂದು ಸಾಧನೆಯಾಗಿದೆ ಎಂದರು.

ADVERTISEMENT

ಬಡವರು ಜಮೆ ಮಾಡಿರುವ ಸುಮಾರು ₹ 1.75 ಲಕ್ಷ ಕೋಟಿ ಪ್ರಸ್ತುತ ಜನ ಧನ ಬ್ಯಾಂಕ್‌ ಖಾತೆಯಲ್ಲಿದೆ ಎಂದು ಕಿಶನ್‌ ರೆಡ್ಡಿ ಹೇಳಿದರು.

ಕೆಲವು ರಾಜ್ಯಗಳಲ್ಲಿ ಬಡವರ ಅಭಿವೃದ್ಧಿಗೆ ಅನುಷ್ಠಾನಗೊಳಿಸಿರುವ ಯೋಜನೆಗಳ ಸಹಾಯಧನ, ಪಿಂಚಣಿಗಳನ್ನು ನಕಲಿ ಗುರುತಿನ ಮೂಲಕ ಲೂಟಿ ಮಾಡಲಾಗುತ್ತಿತ್ತು. ಸಹಾಯಧನವನ್ನು ನೇರವಾಗಿ ಖಾತೆಗೆ ಜಮೆ ಮಾಡಲು ಆರಂಭಗೊಂಡ ನಂತರ ಸುಮಾರು 4 ಕೋಟಿ ನಕಲಿ ಪಡಿತರ ಚೀಟಿಗಳು ರದ್ದುಗೊಂಡವು. ಅಷ್ಟೇ ಸಂಖ್ಯೆಯ ನಕಲಿ ಎಲ್‌ಪಿಜಿ ಸಿಲಿಂಡರ್‌ ಖಾತೆಗಳು ನಾಶಗೊಂಡವು ಎಂದರು.

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು ₹ 100 ಬಿಡುಗಡೆಗೊಂಡರೆ ಫಲಾನುಭವಿಗೆ ತಲುಪುವುದು ₹ 15 ಮಾತ್ರ. ₹ 85 ಮಧ್ಯವರ್ತಿಯ ಪಾಲಾಗುತ್ತದೆ ಎಂದಿದ್ದರು. ಆದರೆ ಇಂದು ಒಂದೇ ಒಂದು ಪೈಸೆಯೂ ಮಧ್ಯವರ್ತಿ ಕೈಸೇರುತ್ತಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.