ADVERTISEMENT

ಖರ್ಗೆ ನಡೆ ಸರಿಯಿರಲಿಲ್ಲ: ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್

ಪಿಟಿಐ
Published 22 ಡಿಸೆಂಬರ್ 2023, 16:07 IST
Last Updated 22 ಡಿಸೆಂಬರ್ 2023, 16:07 IST
<div class="paragraphs"><p>ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್</p></div>

ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್

   

ನವದೆಹಲಿ: ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಬೇಡಿಕೆಯನ್ನು ಸಭಾಪತಿಯ ಎದುರು ಇರಿಸಿ, ಸದನವು ನಿಷ್ಕ್ರಿಯವಾಗುವಂತೆ ಮಾಡುವುದು ದುರದೃಷ್ಟಕರ ಹಾಗೂ ಸಾರ್ವಜನಿಕರ ಹಿತಕ್ಕೆ ವಿರುದ್ಧವಾದ ಕೆಲಸ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ಖರ್ಗೆ ಅವರು ತಮ್ಮನ್ನು ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಭೇಟಿ ಮಾಡಲು ನಿರಾಕರಿಸಿದ ಬಗೆಯು ಸಂಸದೀಯ ನಡವಳಿಕೆಗಳಿಗೆ ಅನುಗುಣವಾಗಿ ಇರಲಿಲ್ಲ ಎಂದು ಧನಕರ್ ಅವರು ಪತ್ರದಲ್ಲಿ ಹೇಳಿದ್ದಾರೆ. ಖರ್ಗೆ ಅವರೊಂದಿಗೆ ಮಾತುಕತೆ ನಡೆಸಲು ತಾವು ಬಯಸುತ್ತಿರುವುದಾಗಿಯೂ ಹೇಳಿದ್ದಾರೆ.

ADVERTISEMENT

ರಾಜ್ಯಸಭೆಯ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ ಮಾರನೆಯ ಈ ಪತ್ರ ಬರೆಯಲಾಗಿದೆ. ಕಲಾಪದ ಸಮಯದಲ್ಲಿ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು, ಡಿಸೆಂಬರ್ 13ರಂದು ನಡೆದ ಭದ್ರತಾ ಲೋಪದ ಬಗ್ಗೆ ಚರ್ಚೆಗೆ ಹಾಗೂ ಅದರ ಬಗ್ಗೆ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿ ಧರಣಿ ನಡೆಸಿದ್ದರು.

ಚಳಿಗಾಲದ ಅಧಿವೇಶನದ ಅವಧಿ ಕೊನೆಗೊಳ್ಳುವವರೆಗೆ ಒಟ್ಟು 46 ಸಂಸದರನ್ನು ಸದನದಿಂದ ಅಮಾನತು ಮಾಡಲಾಯಿತು. ಸದನದ ಕಲಾಪ ಸುಗಮವಾಗಿ ನಡೆಯುವಂತೆ ಮಾಡಲು ಧನಕರ್ ಅವರು ಖರ್ಗೆ ಅವರೊಂದಿಗೆ ಸಭೆ ನಿಗದಿ ಮಾಡಲು ಯತ್ನಿಸಿದರೂ, ಅದಕ್ಕೆ ಖರ್ಗೆ ಅವರಿಂದ ಸ್ಪಂದನ ಸಿಗಲಿಲ್ಲ. ಇದು ತಮಗೆ ನೋವು ತಂದಿದೆ ಎಂದು ಧನಕರ್ ಅವರು ಪತ್ರದಲ್ಲಿ ಹೇಳಿದ್ದಾರೆ.

ಸಂಸದೀಯ ವ್ಯವಸ್ಥೆಯಲ್ಲಿ ಸಭಾಪತಿ ಜೊತೆ ಮಾತುಕತೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಧನಕರ್ ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಧನಕರ್ ಅವರು ಖರ್ಗೆ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿರೋಧ ಪಕ್ಷಗಳ ಸದಸ್ಯರು ನಿರ್ದಿಷ್ಟ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಲು ಮನವಿ ಮಾಡಿದ ಬಗೆಯು ನಿಗದಿತ ಪ್ರಕ್ರಿಯೆಗಳಿಗೆ ಅನುಗುಣವಾಗಿ ಇರಲಿಲ್ಲ. ಈ ಕಾರಣಕ್ಕಾಗಿ ತಾವು ಮನವಿಯನ್ನು ಒಪ್ಪಲು ಸಾಧ್ಯವಿರಲಿಲ್ಲ ಎಂದು ಧನಕರ್ ಅವರು ಖರ್ಗೆ ಅವರಿಗೆ ಹೇಳಿದ್ದಾರೆ.

ಪವಾರ್‌ಗೂ ಪತ್ರ

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಪತ್ರ ಬರೆದಿರುವ ಧನಕರ್, ರಾಜ್ಯಸಭೆಯ ಸಂಸದರನ್ನು ಅಮಾನತು ಮಾಡುವುದು ಅನಿವಾರ್ಯವಾಗಿತ್ತು ಎಂದು ಹೇಳಿದ್ದಾರೆ. ಸಂಸದರು ತೋರಿದ ಅತಿರೇಕದ ದುರ್ವರ್ತನೆಯ ಕಾರಣದಿಂದಾಗಿ ಹೀಗೆ ಮಾಡಬೇಕಾಯಿತು ಎಂದಿದ್ದಾರೆ. ಸಂಸದರ ಅಮಾನತು ವಿಚಾರದಲ್ಲಿ ರಾಜ್ಯಸಭೆಯ ಸಭಾಪತಿಯಾಗಿ ತಾವು ಮಧ್ಯಪ್ರವೇಶಿಸಬೇಕು ಎಂದು ಕೋರಿ ಪವಾರ್ ಅವರು ಧನಕರ್ ಅವರಿಗೆ ‍ಪತ್ರ ಬರೆದು ಆಗ್ರಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.