ADVERTISEMENT

ಆನ್‌ಲೈನ್‌ ಗೇಮಿಂಗ್‌ ಉದ್ಯಮವನ್ನು ಸರ್ಕಾರ ನಿಯಂತ್ರಿಸಬೇಕು: ಸುಶೀಲ್‌ ಮೋದಿ

ಪಿಟಿಐ
Published 3 ಡಿಸೆಂಬರ್ 2021, 11:20 IST
Last Updated 3 ಡಿಸೆಂಬರ್ 2021, 11:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮಕ್ಕಳು ಮೊಬೈಲ್‌ ಗೇಮ್‌ಗಳ ವ್ಯಸನಿಯಾಗುತ್ತಿರುವ ಬಗ್ಗೆ ರಾಜ್ಯಸಭೆ ಸದಸ್ಯ ಹಾಗೂ ಬಿಜೆಪಿ ಹಿರಿಯ ಮುಖಂಡ ಸುಶೀಲ್‌ ಕುಮಾರ್‌ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ ಗೇಮಿಂಗ್‌ ಉದ್ಯಮವನ್ನು ಸರ್ಕಾರ ನಿಯಂತ್ರಿಸಬೇಕು. ಈ ಬಗ್ಗೆ ಏಕರೂಪದ ತೆರಿಗೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಶೂನ್ಯ ಅವಧಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಆನ್‌ಲೈನ್‌ ಗೇಮ್‌ಗಳು ಈಗ ಜೂಜು ಮತ್ತು ಬೆಟ್ಟಿಂಗ್‌ ದಂಧೆಗೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.

ADVERTISEMENT

ಈ ವಿಷಯದ ಬಗ್ಗೆ ಗಮನ ಹರಿಸುವಂತೆ ರಾಜ್ಯಸಭೆ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ವಾರ್ತಾ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಸೂಚಿಸಿದರು.

‘ಇದೊಂದು ದೊಡ್ಡ ಪಿಡುಗಾಗಿದ್ದು ಕಾನೂನು ಸಚಿವರನ್ನು ಸಂಪರ್ಕಿಸಿ ಈ ಬಗ್ಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ’ ಎಂದು ಹೇಳಿದರು.

‘ಆನ್‌ಲೈನ್‌ ಗೇಮಿಂಗ್‌ ಈಗ ದೊಡ್ಡದೊಂದು ವ್ಯಸನವಾಗುತ್ತಿದೆ. ಕ್ರಿಪ್ಟೊ ಉದ್ಯಮದ ರೀತಿ ಇದಕ್ಕೆ ಯಾವುದೇ ನಿಯಂತ್ರಣವಿಲ್ಲ. ಆದ್ದರಿಂದ ಸರ್ಕಾರ ಇದರ ಮೇಲೆ ಏಕರೂಪದ ತೆರಿಗೆಯನ್ನು ತರಬೇಕು. ಇದಕ್ಕೆ ಸೂಕ್ತ ನಿಯಂತ್ರಣದ ಚೌಕಟ್ಟು ವಿಧಿಸಬೇಕು’ ಎಂದು ಅವರು ಹೇಳಿದರು.

ಯಾವುದೇ ನಿಯಂತ್ರಣವಿಲ್ಲದಿದ್ದರೆ ಮಕ್ಕಳನ್ನು ಆನ್‌ಲೈನ್‌ ಗೇಮ್‌ ವ್ಯಸನದಿಂದ ಮುಕ್ತಗೊಳಿಸುವುದು ಕಷ್ಟವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.