ADVERTISEMENT

ರಾಜ್ಯಸಭಾ ಚುನಾವಣೆ: ಅಶ್ವಿನಿ ವೈಷ್ಣವ್, ಮುರುಗನ್, ನಡ್ಡಾ ಕಣಕ್ಕೆ

ಕಾಂಗ್ರೆಸ್‌ ತೊರೆದಿದ್ದ ಅಶೋಕ್ ಚವ್ಹಾಣ್, ಮಿಲಿಂದ್‌ ದೇವರಾ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 14:10 IST
Last Updated 15 ಫೆಬ್ರುವರಿ 2024, 14:10 IST
<div class="paragraphs"><p>ಕೇಂದ್ರ ಸಚಿವ ಎಲ್.ಮುರುಗನ್,&nbsp;ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಬನ್ಶಿಲಾಲ್ ಗುರ್ಜರ್, ಮಹಿಳಾ ಘಟಕದ ಅಧ್ಯಕ್ಷೆ ಮಾಯಾ ನರೋಲಿಯಾ ಹಾಗೂ ವಾಲ್ಮೀಕಿ ಧಾಮ್ ಆಶ್ರಮದ ಮುಖ್ಯಸ್ಥ ಉಮೇಶ್ ನಾಥ್ ಮಹಾರಾಜ್‌ ಬಿಜೆಪಿ ಅಭ್ಯರ್ಥಿಗಳಾಗಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು –ಪಿಟಿಐ ಚಿತ್ರ</p></div>

ಕೇಂದ್ರ ಸಚಿವ ಎಲ್.ಮುರುಗನ್, ಬಿಜೆಪಿ ಕಿಸಾನ್ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಬನ್ಶಿಲಾಲ್ ಗುರ್ಜರ್, ಮಹಿಳಾ ಘಟಕದ ಅಧ್ಯಕ್ಷೆ ಮಾಯಾ ನರೋಲಿಯಾ ಹಾಗೂ ವಾಲ್ಮೀಕಿ ಧಾಮ್ ಆಶ್ರಮದ ಮುಖ್ಯಸ್ಥ ಉಮೇಶ್ ನಾಥ್ ಮಹಾರಾಜ್‌ ಬಿಜೆಪಿ ಅಭ್ಯರ್ಥಿಗಳಾಗಿ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು –ಪಿಟಿಐ ಚಿತ್ರ

   

ಭುವನೇಶ್ವರ/ಗಾಂಧಿನಗರ/ಮುಂಬೈ/ಭೋಪಾಲ್ : ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌, ಎಲ್‌. ಮುರುಗನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಈಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವ್ಹಾಣ್, ಮಾಜಿ ಸಂಸದ ಮಿಲಿಂದ್‌ ದೇವರಾ ಅವರು ರಾಜ್ಯಸಭೆ ಚುನಾವಣೆಗೆ ಗುರುವಾರ ನಾಮಪತ್ರ ಸಲ್ಲಿಸಿದರು.

15 ರಾಜ್ಯಗಳ 56 ಸ್ಥಾನಗಳಿಗೆ ಫೆ. 27ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು, ವಿವಿಧ ರಾಜ್ಯಗಳಿಂದ ಬಿಜೆಪಿ, ಕಾಂಗ್ರೆಸ್‌, ಆರ್‌ಜೆಡಿ ಹಾಗೂ ಎನ್‌ಸಿಪಿಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.

ADVERTISEMENT

ಒಡಿಶಾದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನಾಮಪತ್ರ ಸಲ್ಲಿಸಿದರು. ಆಡಳಿತಾರೂಢ ಬಿಜೆಡಿ ವೈಷ್ಣವ್‌ಗೆ ಬೆಂಬಲ ನೀಡಿದೆ.

ಗುಜರಾತ್‌ನಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸ್ಥಳೀಯ ಮುಖಂಡರಾದ ಜಸವಂತಸಿಂಹ ಪರಮಾರ್, ಗೋವಿಂದ ಢೋಲಕಿಯಾ, ಮಯಂಕ್ ನಾಯಕ್ ಗಾಂಧಿನಗರದಲ್ಲಿ ನಾಮಪತ್ರ ಸಲ್ಲಿಸಿದರು.

ಮಹಾರಾಷ್ಟ್ರದಿಂದ ಆರು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಮಾಜಿ ಮುಖ್ಯಮಂತ್ರಿ ‌ಅಶೋಕ್ ಚವ್ಹಾಣ್ ಬಿಜೆಪಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕರಾದ ಮೇಧಾ ಕುಲಕರ್ಣಿ, ಆರ್‌ಎಸ್‌ಎಸ್‌ ಕಾರ್ಯಕರ್ತ ಡಾ.ಅಜಿತ್ ಗೋಪ್ಚಡೆ ಸಹ ಕಮಲ ಪಕ್ಷದ ಉಮೇದುವಾರರಾಗಿ ನಾಮಪತ್ರ ಸಲ್ಲಿಸಿದರು.

ಮುಖ್ಯಮಂತ್ರಿ ಏಕನಾಥ ಶಿಂದೆ ಬಣದ ಶಿವಸೇನೆ ಅಭ್ಯರ್ಥಿಯಾಗಿ ಈಚೆಗಷ್ಟೇ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರಿದ್ದ ಮಾಜಿ ಸಂಸದ ಮಿಲಿಂದ್ ದೇವರಾ, ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯಿಂದ ಪ್ರಫುಲ್‌ ಪಟೇಲ್‌, ಕಾಂಗ್ರೆಸ್ ಅಭ್ಯರ್ಥಿಯಾಗಿ ಚಂದ್ರಕಾಂತ್ ಹಂಡೋರೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಮಧ್ಯಪ್ರದೇಶದಿಂದ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರ ಸಚಿವ ಎಲ್.ಮುರುಗನ್, ಕಿಸಾನ್ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಬನ್ಶಿಲಾಲ್ ಗುರ್ಜರ್, ಮಹಿಳಾ ಘಟಕದ ಅಧ್ಯಕ್ಷೆ ಮಾಯಾ ನರೋಲಿಯಾ, ವಾಲ್ಮೀಕಿ ಧಾಮ್ ಆಶ್ರಮದ ಮುಖ್ಯಸ್ಥ ಉಮೇಶ್ ನಾಥ್ ಮಹಾರಾಜ್‌ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್‌ನ ರಾಜ್ಯ ಘಟಕದ ಖಜಾಂಚಿ ಅಶೋಕ್‌ ಸಿಂಗ್‌ ನಾಮಪತ್ರ ಸಲ್ಲಿಸಿದರು.

ಬಿಹಾರದಿಂದ ರಾಷ್ಟ್ರೀಯ ಜನತಾದಳದ ಅಭ್ಯರ್ಥಿಗಳಾಗಿ (ಆರ್‌ಜೆಡಿ) ಮನೋಜ್‌ ಕುಮಾರ್ ಝಾ ಮತ್ತು ಸಂಜಯ್ ಯಾದವ್ ನಾಮಪತ್ರ ಸಲ್ಲಿಸಿದರು. ಝಾ ಅವರು ಆರ್‌ಜೆಡಿಯ ರಾಷ್ಟ್ರೀಯ ವಕ್ತಾರ. ಯಾದವ್ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಆಪ್ತರು.

ಉತ್ತರಾಖಂಡ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಭಟ್ ಅವರೂ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಎಂಟನೇ ಅಭ್ಯರ್ಥಿ ಅಖಾಡಕ್ಕೆ
ಉತ್ತರ ಪ್ರದೇಶದಿಂದ ರಾಜ್ಯಸಭೆಯ 10 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯು ರಂಗೇರಿದೆ. ಈಗಾಗಲೇ ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಜೆಪಿಯು ಎಂಟನೇ ಅಭ್ಯರ್ಥಿಯನ್ನಾಗಿ ಸಮಾಜವಾದಿ ಪಕ್ಷದ ಮಾಜಿ ಮುಖಂಡನನ್ನು ಗುರುವಾರ ಅಖಾಡಕ್ಕಿಳಿಸಿದೆ. ಸಮಾಜವಾದಿ ಪಕ್ಷ ಮೂವರನ್ನು ತನ್ನ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಿದೆ. ಸಮಾಜವಾದಿ ಪಕ್ಷದ ಮಾಜಿ ಮುಖಂಡ 2019ರಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಸಂಜಯ್ ಸೇಠ್ ಬಿಜೆಪಿಯ 8ನೇ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದು ಒಂದು ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.