ನವದೆಹಲಿ: ‘ಸಲಿಂಗ ವಿವಾಹವನ್ನು ಆರೆಸ್ಸೆಸ್ ಒಪ್ಪುವುದಿಲ್ಲ. ಆದರೆ, ಸಲಿಂಗ ಲೈಂಗಿಕ ಬಾಂಧವ್ಯ ವಿಷಯದಲ್ಲಿ ಮುಕ್ತವಾಗಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದೆ.
‘ಇಬ್ಬರು ಒಟ್ಟಿಗೆ ವಾಸಿಸಬಹುದು. ಆದರೆ, ಮದುವೆ ಎಂಬುದು ಗಂಡು ಮತ್ತು ಹೆಣ್ಣಿನ ನಡುವೆಯೇ ಆಗಬೇಕು. ವಿವಾಹ ಎಂಬುದು ರಂಜನೆಗೆ ಇರುವ ಒಪ್ಪಂದ ಅಥವಾ ಮಾರ್ಗವಲ್ಲ’ ಎಂದು ಆರೆಸ್ಸೆಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಹೇಳಿದರು.
‘ಅಖಿಲ ಭಾರತ ಪ್ರಜಾಪ್ರತಿನಿಧಿ ಸಭಾ’ದ ಕೊನೆಯ ದಿನ ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಸಲಿಂಗ ವಿವಾಹ ಕುರಿತಂತೆ ಕೇಂದ್ರ ಸರ್ಕಾರವು ಈಗ ತಳೆದಿರುವ ನಿಲುವನ್ನು ಆರೆಸ್ಸೆಸ್ ಬೆಂಬಲಿಸಲಿದೆ. ಬಿಜೆಪಿ ಸರ್ಕಾರವು ಸಲಿಂಗ ವಿವಾಹವನ್ನು ವಿರೋಧಿಸಿದೆ. ಈ ಕುರಿತಂತೆ ತನ್ನ ನಿಲುವನ್ನು ಈಗಾಗಲೇ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ’ ಎಂದೂ ಅವರು ಉಲ್ಲೇಖಿಸಿದರು.
ಹಿಂದೂಗಳ ಜೀವನಶೈಲಿಯಲ್ಲಿ ಮದುವೆಯು ಸಂಸ್ಕೃತಿಯ ಭಾಗವಾಗಿದೆ. ಇಬ್ಬರು ಒಟ್ಟಿಗೆ ಬದುಕುವುದು ಅವರಿಗಾಗಿ ಅಲ್ಲ, ಕುಟುಂಬವನ್ನು ಬೆಳೆಸಲು. ಸಮಾಜದ ಉನ್ನತಿಗಾಗಿ. ಮದುವೆ ಎಂಬುದು ವೈಯಕ್ತಿಕ, ದೈಹಿಕ ಅಥವಾ ಲೈಂಗಿಕ ಖುಷಿಗಾಗಿ ಅಷ್ಟೇ ಅಲ್ಲ’ ಎಂದು ಅವರು ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.