ADVERTISEMENT

ಆರ್‌ಎಸ್‌ಎಸ್ ಅಪ್ರಸ್ತುತ: ಕಾಂಗ್ರೆಸ್‌

ಪಿಟಿಐ
Published 12 ಜೂನ್ 2024, 11:20 IST
Last Updated 12 ಜೂನ್ 2024, 11:20 IST
ಕಾಂಗ್ರೆಸ್‌
ಕಾಂಗ್ರೆಸ್‌   

ನವದೆಹಲಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಅಪ್ರಸ್ತುತವಾಗಿದೆ. ಈಗ ಅದರ ಮುಖ್ಯಸ್ಥರು ಮಾತನಾಡುವುದರಲ್ಲಿ ಅರ್ಥವೇ ಇಲ್ಲ’ ಎಂದು ಕಾಂಗ್ರೆಸ್ ಬುಧವಾರ ಟೀಕಿಸಿದೆ. 

ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸಮಾಜದ ರಕ್ಷಣೆಗೆ ಆರ್‌ಎಸ್‌ಎಸ್‌ನ ಅಗತ್ಯವಿಲ್ಲ. ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲಿ ಎಂದು ಅದು ಹೇಳಿದೆ.

ಮಣಿಪುರ ಹಿಂಸಾಚಾರ ಮತ್ತು ಈಗಷ್ಟೇ ಮುಕ್ತಾಯಗೊಂಡ ಲೋಕಸಭೆ ಚುನಾವಣೆ ಸೇರಿದಂತೆ ಹಲವು ವಿಷಯಗಳ ಕುರಿತು ಭಾಗವತ್ ಅವರು ನೀಡಿರುವ ಹೇಳಿಕೆಗಳಿಗೆ ವಿರೋಧ ಪಕ್ಷ ಕಾಂಗ್ರೆಸ್‌ ಈ ರೀತಿ ಪ್ರತಿಕ್ರಿಯಿಸಿದೆ. ವರ್ಷ ಕಳೆದರೂ ಮಣಿಪುರದಲ್ಲಿ ಶಾಂತಿ ನೆಲಸದಿರುವ ಬಗ್ಗೆ ಭಾಗವತ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದರು.

ADVERTISEMENT

‘ಮೋಹನ್ ಭಾಗವತ್ ಜೀ, ನೀವು ಬಿತ್ತಿದ್ದನ್ನು ನೀವು ಕೊಯ್ಯುತ್ತೀರಿ. ತಪ್ಪು ಮಣ್ಣಿನದ್ದಲ್ಲ, ತೋಟಗಾರನದ್ದು’ ಎಂದು ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಮಾರ್ಮಿಕವಾಗಿ ಹೇಳಿದ್ದಾರೆ. 

‘ರಾಜಧಾನಿಯ ಹೊರಗೆ ರೈತರು ಹವಾಮಾನ ಮತ್ತು ಪೊಲೀಸರ ಕೆಂಗಣ್ಣಿಗೆ ಗುರಿಯಾದಾಗ ನೀವು ಮೌನವಾಗಿದ್ದಿರಿ. ಹತ್ರಾಸ್‌ನಲ್ಲಿ ದಲಿತ ಹುಡುಗಿಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದಾಗ ನೀವು ಮೌನವಾಗಿದ್ದಿರಿ. ಬಿಲ್ಕಿಸ್ ಬಾನೊ ಮೇಲಿನ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿದಾಗ ಮತ್ತು ನಿಮ್ಮ ಸೈದ್ಧಾಂತಿಕ ಸಹೋದರರು ಅವರನ್ನು ಸ್ವಾಗತಿಸಿದಾಗಲೂ ನೀವು ಮೌನವಾಗಿದ್ದಿರಿ, ದಲಿತರ ಮೇಲೆ ಮೂತ್ರ ವಿಸರ್ಜಿಸಿದಾಗ, ಕನ್ಹಯ್ಯಾ ಲಾಲ್‌ನ ಕೊಲೆಗಾರರ ಬಿಜೆಪಿಯೊಂದಿಗಿನ ನಂಟು ಬಹಿರಂಗವಾದಾಗಲೂ ನೀವು ಮೌನವಾಗಿದ್ದಿರಿ. ಈಗ ನೀವು ಮಾತಾಡಿ ಏನು ಪ್ರಯೋಜನ’ ಎಂದು ಖೇರಾ ಪ್ರಶ್ನಿಸಿದ್ದಾರೆ.

‘ನಿಮ್ಮ ಮೌನ ಮತ್ತು ನರೇಂದ್ರ ಮೋದಿ ನಿಮ್ಮನ್ನು ಹಾಗೂ ನಿಮ್ಮ ಸಂಘವನ್ನು ಅಪ್ರಸ್ತುತಗೊಳಿಸಿದ್ದಾರೆ. ಅಮಿತ್ ಶಾ ಮತ್ತು ಬಿಜೆಪಿ ನಿಮ್ಮನ್ನು ಅಪ್ರಸ್ತುತಗೊಳಿಸಿದೆ. ನಿಮಗೆ ಕೊನೆಯ ಅವಕಾಶವಿತ್ತು, ಅದು ಯಾವಾಗೆಂದರೆ, ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸುವ ಮಾತನಾಡಿದಾಗ ನೀವು ಮಾತನಾಡಬೇಕಿತ್ತು. ಆದರೆ, ನೀವು ಆಗಲೂ ಮೌನವಾಗಿಯೇ ಉಳಿದುಬಿಟ್ಟಿರಿ’ ಎಂದು ಖೇರಾ ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರೂ ಸಂತ ಕಬೀರರ ‘ಬಿತ್ತಿದ್ದನ್ನು ಕೊಯ್ಯುತ್ತಿರಿ’ ಎನ್ನುವ ಸಂದೇಶದ ದ್ವಿಪದಿಯನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿ ಆರ್‌ಎಸ್‌ಎಸ್‌ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.