ADVERTISEMENT

ಜನಸಂಖ್ಯಾ ಸ್ವರೂಪದಲ್ಲಿ ಅಸಮತೋಲನ: ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್’

ಜನಸಂಖ್ಯಾ ನಿಯಂತ್ರಣಕ್ಕೆ ನೀತಿ ರೂಪಿಸುವುದು ಅಗತ್ಯ: ‘ಆರ್ಗನೈಸರ್‌’ 

ಪಿಟಿಐ
Published 9 ಜುಲೈ 2024, 16:11 IST
Last Updated 9 ಜುಲೈ 2024, 16:11 IST
<div class="paragraphs"><p>ಸಾಂಕೇತಿಕ ಚಿತ್ರ&nbsp;</p></div>

ಸಾಂಕೇತಿಕ ಚಿತ್ರ 

   

ನವದೆಹಲಿ: ಮುಸ್ಲಿಮರ ಜನಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿರುವುದು ದೇಶದ ಕೆಲವೆಡೆ ‘ಜನಸಂಖ್ಯಾ ಸ್ವರೂಪದ ಅಸಮತೋಲನ’ಕ್ಕೆ ಕಾರಣವಾಗಿದೆ ಎಂದು ಆರ್‌ಎಸ್‌ಎಸ್‌ ಮುಖವಾಣಿ ‘ಆರ್ಗನೈಸರ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ.

ಜನಸಂಖ್ಯೆ ದೃಷ್ಟಿಯಿಂದ ಆಗಿರುವ ‘ಪ್ರಾದೇಶಿಕ ಅಸಮತೋಲನ’ದ ಬಗ್ಗೆಯೂ ಸಂಪಾದಕೀಯ ಕಳವಳ ವ್ಯಕ್ತಪಡಿಸಿದ್ದು, ರಾಷ್ಟ್ರಮಟ್ಟದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಮಗ್ರ ನೀತಿಯೊಂದನ್ನು ರೂಪಿಸಬೇಕು ಎಂದು ಒತ್ತಾಯಿಸಿದೆ. 

ADVERTISEMENT

‘ರಾಷ್ಟ್ರಮಟ್ಟದಲ್ಲಿ ಜನಸಂಖ್ಯೆಯನ್ನು ಸ್ಥಿರಗೊಳಿಸಲು ಆಗಿದೆಯಾದರೂ, ಎಲ್ಲಾ ಧರ್ಮಗಳು ಮತ್ತು ಪ್ರದೇಶಗಳಲ್ಲಿ ಇದು ಒಂದೇ ತೆರನಾಗಿಲ್ಲ. ಕೆಲವು ಪ್ರದೇಶಗಳಲ್ಲಿ, ಅದರಲ್ಲೂ ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆಯ ಗಮನಾರ್ಹ ಬೆಳವಣಿಗೆ ಇದೆ’ ಎಂದು ತಿಳಿಸಿದೆ. 

‘ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಮತ್ತು ಉತ್ತರಾಖಂಡದಂತಹ ರಾಜ್ಯಗಳ ಗಡಿಯುದ್ದಕ್ಕೂ ‘ಅಕ್ರಮ ವಲಸೆ’ಯಿಂದಾಗಿ ಜನಸಂಖ್ಯೆಯ ‘ಅಸ್ವಾಭಾವಿಕ’ ಬೆಳವಣಿಗೆಯನ್ನು ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಜನಸಂಖ್ಯೆಯು ನಿರ್ಣಾಯಕವಾದಾಗ ನಾವು ಈ ಬಗ್ಗೆ ಹೆಚ್ಚು ಜಾಗರೂಕರಾಗಿಬೇಕು’ ಎಂದು ಎಚ್ಚರಿಸಿದೆ. 

‘ಪ್ರಾದೇಶಿಕ ಅಸಮತೋಲನವು ಭವಿಷ್ಯದಲ್ಲಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ದೇಶದಲ್ಲಿ ಪಶ್ಚಿಮ ಮತ್ತು ದಕ್ಷಿಣದ ರಾಜ್ಯಗಳು ಜನಸಂಖ್ಯೆ ನಿಯಂತ್ರಣದಲ್ಲಿ ತುಲನಾತ್ಮಕವಾಗಿ ಉತ್ತಮ ಕೆಲಸ ಮಾಡಿವೆ. ಈ ಕಾರಣ ಜನಗಣತಿಯ ನಂತರ ಈ ರಾಜ್ಯಗಳು ಸಂಸತ್ತಿನಲ್ಲಿ ತನ್ನ ಕೆಲವು ಸ್ಥಾನಗಳನ್ನು (ಲೋಕಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆಯಾಗಬಹುದು) ಕಳೆದುಕೊಳ್ಳುವ ಸಾಧ್ಯತೆಯಿದೆ’ ಎಂದಿದೆ.

‘ಆದ್ದರಿಂದ, ಜನಸಂಖ್ಯೆಯ ಬೆಳವಣಿಗೆಯು ಒಂದೇ ಧಾರ್ಮಿಕ ಸಮುದಾಯ ಅಥವಾ ಒಂದು ಪ್ರದೇಶದ ಮೇಲೆ ಅಸಮಾನ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸಮಗ್ರ ನೀತಿಯೊಂದರ ಅಗತ್ಯವಿದೆ’ ಎಂದು ಪ್ರತಿಪಾದಿಸಿದೆ.

ರಾಹುಲ್‌ ಮಮತಾ ವಿರುದ್ಧ ಟೀಕೆ ‘ರಾಹುಲ್‌ ಗಾಂಧಿ ಅವರಂತಹ ರಾಜಕಾರಣಿಗಳು ಆಗೊಮ್ಮೆ ಈಗೊಮ್ಮೆ ಹಿಂದೂಗಳ ಭಾವನೆಗಳಿಗೆ ನೋವುಂಟುಮಾಡಲು ಶಕ್ತರಾಗುತ್ತಾರೆ. ಮಮತಾ ಬ್ಯಾನರ್ಜಿ (ಪಶ್ಚಿಮ ಬಂಗಾಳದ ಮುಖ್ಯಮಂತ್ರಿ) ಅವರು ಮುಸ್ಲಿಮರ ಓಲೈಕೆಗಾಗಿ ಸಂದೇಶ್‌ಖಾಲಿಯಲ್ಲಿ ಇಸ್ಲಾಮಿಸ್ಟ್‌ಗಳು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿದ್ದಾರೆ. ದ್ರಾವಿಡ ಪಕ್ಷಗಳು ಸನಾತನ ಧರ್ಮವನ್ನು ಅವಹೇಳನ ಮಾಡುವುದೇ ತಮ್ಮ ಹೆಮ್ಮೆ ಎಂದು ಅಂದುಕೊಂಡಿವೆ. ಜನಸಂಖ್ಯಾ ಸ್ವರೂಪದ ಅಸಮತೋಲದಿಂದ ಸೃಷ್ಟಿಯಾಗಿರುವ ‘ಮುಸ್ಲಿಂ ಮತ ಬ್ಯಾಂಕ್’ ತಮ್ಮ ಪರ ಇದೆ ಎಂಬ ವಿಶ್ವಾಸವೇ ಇದಕ್ಕೆಲ್ಲ ಕಾರಣ’ ಎಂದು ಸಂಪಾದಕೀಯದಲ್ಲಿ ಆರೋಪಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.