ADVERTISEMENT

ವಾಯುಪಡೆ, ಮೋದಿ ಸರ್ಕಾರವನ್ನು ಶ್ಲಾಘಿಸಿದ ಆರ್‌ಎಸ್‌ಎಸ್‌

ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾ ಆರಂಭ

ಪಿಟಿಐ
Published 8 ಮಾರ್ಚ್ 2019, 11:33 IST
Last Updated 8 ಮಾರ್ಚ್ 2019, 11:33 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಗ್ವಾಲಿಯರ್‌: ಪಾಕಿಸ್ಥಾನದ ಭಯೋತ್ಪಾದಕರ ಶಿಬಿರಗಳ ಮೇಲೆ ವೈಮಾನಿಕ ದಾಳಿ ನಡೆಸಿರುವ ಭಾರತೀಯ ವಾಯು ಪಡೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಶ್ಲಾಘಿಸಿದೆ. ಇಂತಹ ನಿರ್ಧಾರ ಕೈಗೊಂಡಿರುವ ಕೇಂದ್ರದ ಮೋದಿ ಸರ್ಕಾರವನ್ನೂ ಹೊಗಳಿದೆ.

ಶುಕ್ರವಾರ ಇಲ್ಲಿ ಆರಂಭಗೊಂಡ ಆರ್‌ಎಸ್‌ಎಸ್‌ನಮೂರು ದಿನಗಳ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮೊದಲ ದಿನ ಈ ಕುರಿತು ನಿರ್ಣಯ ಅಂಗೀಕರಿಸಲಾಗಿದೆ.

’ದೇಶ ವಿರೋಧಿ ಶಕ್ತಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಇಂತಹ ಶಕ್ತಿಗಳ ವಿರುದ್ಧ ಭಾರತೀಯರು ಜಾಗೃತರಾಗಿರಬೇಕು‘ ಎಂದು ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನ್‌ಮೋಹನ್‌ ವೈದ್ಯ ತಿಳಿಸಿದ್ದಾರೆ.

ADVERTISEMENT

’ಪುಲ್ವಾಮಾ ಸೇರಿದಂತೆ ವಿವಿಧೆಡೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಸಭೆಯಲ್ಲಿ ಶೋಕ ವ್ಯಕ್ತಪಡಿಸಲಾಗಿದೆ‘ ಎಂದೂ ಅವರು ಹೇಳಿದ್ದಾರೆ.

’ಆರ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಸರಕಾರ್ಯವಾಹ ಭಯ್ಯಾಜಿ ಜೋಶಿ ಸೇರಿದಂತೆ ಪ್ರತಿನಿಧಿ ಸಭಾದ 1,400 ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶಬರಿಮಲೆ ದೇಗುಲ ವಿವಾದವು ಚರ್ಚೆಯಾಗಲಿದೆ‘ ಎಂದೂ ಮನ್‌ಮೋಹನ್‌ ಹೇಳಿದ್ದಾರೆ.

’ಕೇರಳ ಸರ್ಕಾರವು ಹಿಂದೂಗಳಲ್ಲದ ಮಹಿಳೆಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶ ಕಲ್ಪಿಸುವ ಮೂಲಕ ಹಿಂದೂಗಳ ನಂಬಿಕೆಯ ಜೊತೆ ಆಟವಾಡುತ್ತಿದೆ ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಕಾರ್ಯ ನಿರ್ವಹಿಸುತ್ತಿದೆ‘ ಎಂದು ಅವರು ಆರೋಪಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ವಿಷಯದ ಕುರಿತು ಮಾತನಾಡಿದ ಅವರು, ’ನಮಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಪೂರ್ಣ ಭರವಸೆ ಇದೆ. ಎಲ್ಲಾ ಅಡೆ ತಡೆಗಳು ನಿವಾರಣೆಯಾಗಿ ಮಂದಿರ ನಿರ್ಮಾಣವಾಗುವ ವಿಶ್ವಾಸ ಇದೆ‘ ಎಂದೂ ಅವರು ಹೇಳಿದ್ದಾರೆ.

’ಲೋಕಸಭಾ ಚುನಾವಣೆಯ ಬಗ್ಗೆ ಸಭೆಯಲ್ಲಿ ಪ್ರತ್ಯೇಕ ಚರ್ಚೆ ನಡೆಸುವುದಿಲ್ಲ‘ ಎಂದೂ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.