ನವದೆಹಲಿ: ತಿರಂಗವನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವನ್ನಾಗಿ ಬದಲಿಸಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್) ಅನುಸರಿಸಲಿದೆಯೇ ಎಂದು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಜವಾಹರಲಾಲ್ ನೆಹರೂ ಅವರು ತ್ರಿವರ್ಣ ಧ್ವಜವನ್ನು ಹಿಡಿದಿರುವ ಚಿತ್ರವನ್ನು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವನ್ನಾಗಿಸಿಕೊಂಡಿರುವ ಜೈರಾಮ್ ರಮೇಶ್, 'ಸಂಘವೊಂದು ಸ್ವಾತಂತ್ರ್ಯ ಸಿಕ್ಕಿದ ಬಳಿಕ 52 ವರ್ಷಗಳ ವರೆಗೆ ನಾಗ್ಪುರದ ಮುಖ್ಯ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ. ಇದೀಗ ನರೇಂದ್ರ ಮೋದಿ ಕರೆಯನ್ನು ಒಪ್ಪಿಕೊಂಡು ತನ್ನ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರವನ್ನು ಬದಲಿಸಲಿದೆಯೇ' ಎಂದು ಆರ್‌ಎಸ್‌ಎಸ್ ಅನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.
1929ರ ಲಾಹೋರ್ ಸೆಷನ್‌ನಲ್ಲಿ ರಾವಿ ನದಿಯ ದಡದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಿದ ಪಂಡಿತ್ ನೆಹರೂ ಅವರು , 'ಒಬ್ಬ ಭಾರತೀಯ ಜೀವಂತವಿದ್ದರೂ ತ್ರಿವರ್ಣ ಧ್ವಜ ಕೆಳಗಿಳಿಯಬಾರದು' ಎಂದು ಕರೆ ನೀಡಿದ್ದನ್ನು ಜೈರಾಮ್ ರಮೇಶ್ ಸ್ಮರಿಸಿದ್ದಾರೆ.
ನನ್ನ ತಿರಂಗ ನನ್ನ ಹೆಮ್ಮ (#MyTirangaMyPride) ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿರುವ ರಮೇಶ್, 'ನೆಹರೂ ಅವರು ತ್ರಿವರ್ಣ ಧ್ವಜ ಹಿಡಿದಿರುವ ಚಿತ್ರವನ್ನು ನಾವು ಡಿಪಿಯನ್ನಾಗಿ ಹಾಕಿಕೊಂಡಿದ್ದೇವೆ. ಆದರೆ ಪ್ರಧಾನಿ ಸಂದೇಶವು ಅವರದ್ದೇ ಕುಟುಂಬಕ್ಕೆ ತಲುಪಿದಂತಿಲ್ಲ' ಎಂದು ಆರ್‌ಎಸ್‌ಎಸ್ ಅನ್ನು ಉಲ್ಲೇಖಿಸದೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನೆಹರೂ ಚಿತ್ರದ ಜೊತೆಗೆ 'ಅದೂ ಖಾದಿಯಲ್ಲಿ' ಎಂದು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.
ಆರ್‌ಎಸ್‌ಎಸ್ ಮತ್ತು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರಗಳು ತಿರಂಗವಾಗಿ ಬದಲಾಗದಿರುವುದನ್ನು ಬೊಟ್ಟು ಮಾಡಿ ಸ್ಕ್ರೀನ್‌ಶಾಟ್‌ಗಳನ್ನು ಕೆಲವು ಕಾಂಗ್ರೆಸ್ ಮುಖಂಡರು ಹಂಚಿಕೊಂಡಿದ್ದಾರೆ.
'ಈಗಲಾದರೂ ಸಂಘದ ಮಂದಿ ತ್ರಿವರ್ಣ ಧ್ವಜವನ್ನು ಸ್ವೀಕಾರ ಮಾಡಲಿ' ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.