ನವದೆಹಲಿ: ಸಂಸತ್ತಿನ ಬಗ್ಗೆ ಮೋದಿ ಸರ್ಕಾರ ಹೊಂದಿರುವ ನಿರಂಕುಶ ಮತ್ತು ದುರಹಂಕಾರದ ಧೋರಣೆಯನ್ನು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರು ಸಮರ್ಥಿಸುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಇದರೊಂದಿಗೆ ಇಬ್ಬರ ನಡುವಣ ‘ಪತ್ರ ಸಮರ’ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ‘ರಾಜಕೀಯ ತಂತ್ರ’ ಎಂದು ದಿನಕರ್ ಅವರು ಟೀಕಿಸಿದ್ದರು.
ಅದಕ್ಕೆ ಭಾನುವಾರ ಎರಡು ಪುಟಗಳ ಪತ್ರದ ಮೂಲಕ ಪ್ರತ್ಯುತ್ತರ ನೀಡಿರುವ ಖರ್ಗೆ, ಆಡಳಿತ ಪಕ್ಷವು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳುಮಾಡಲು, ಸಂಸದೀಯ ವ್ಯವಸ್ಥೆ ಮತ್ತು ಸಂವಿಧಾನದ ತತ್ವಗಳನ್ನು ನಾಶಮಾಡಲು ‘ಸಂಸದರ ಅಮಾನತು ಪ್ರಕ್ರಿಯೆ’ಯನ್ನು ಸುಲಭ ಅಸ್ತ್ರವಾಗಿ ಬಳಸಿಕೊಂಡಿದೆ ಎಂದು ದೂರಿದ್ದಾರೆ.
ಸಂಸದೀಯ ವ್ಯವಸ್ಥೆಯನ್ನು ಶಿಥಿಲಗೊಳಿಸಲು ಆಡಳಿತ ಪಕ್ಷವು ಉದ್ದೇಶಪೂರ್ವಕವಾಗಿ ಈ ಕ್ರಮ ತೆಗೆದುಕೊಂಡಿದೆ. 146 ಸಂಸದರನ್ನು ಅಮಾನತು ಮಾಡುವ ಮೂಲಕ ಸರ್ಕಾರವು ಅವರ ಧ್ವನಿಯನ್ನು ಪರಿಣಾಮಕಾರಿಯಾಗಿ ಅಡಗಿಸಿದೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ 13 ರಂದು ನಡೆದ ಸಂಸತ್ತಿನ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿ ನಾನೂ ಸೇರಿದಂತೆ ಇತರ ಸಂಸದರು ಸೂಕ್ತ ನಿಯಮಗಳಡಿಯಲ್ಲೇ ನೋಟಿಸ್ ನೀಡಿದ್ದೆವು ಎಂಬುದನ್ನು ಖರ್ಗೆ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
‘ಸದನದಲ್ಲಿ ಹೇಳಿಕೆ ನೀಡಲು ಬಯಸದ ಗೃಹ ಸಚಿವರನ್ನು ಮತ್ತು ಸರ್ಕಾರದ ಧೋರಣೆಯನ್ನು ಸಭಾಪತಿಗಳು ಕ್ಷಮಿಸಿರುವುದು ವಿಷಾದನೀಯ. ಸದನದ ಕಲಾಪ ನಡೆಯುತ್ತಿರುವ ವೇಳೆಯೇ ಗೃಹ ಸಚಿವರು ಈ ಘಟನೆಯ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಈ ರೀತಿ ಪ್ರಜಾಪ್ರಭುತ್ವದ ಮಂದಿರ ಅಪವಿತ್ರಗೊಂಡದ್ದು ಸಭಾಪತಿಯ ಗಮನಕ್ಕೆ ಬರದೇ ಇರುವುದು ಇನ್ನಷ್ಟು ವಿಷಾದಕರ ಸಂಗತಿ’ ಎಂದಿದ್ದಾರೆ.
‘ಲೋಕಸಭೆ ಮತ್ತು ರಾಜ್ಯಸಭೆ ಸಂಸದರ ಅಮಾನತು ಪ್ರಕ್ರಿಯೆಯು ಪೂರ್ವಯೋಜಿತ ಎಂದು ತೋರುತ್ತದೆ. ಯಾವುದೇ ರೀತಿಯ ಆಲೋಚನೆ ಮಾಡದೆ ಕ್ರಮ ಜರುಗಿಸಲಾಗಿತ್ತು. ಲೋಕಸಭೆ ಕಲಾಪಕ್ಕೆ ಹಾಜರಾಗದ ಒಬ್ಬರು ಸಂಸದರನ್ನು ಕೂಡಾ ಅಮಾನತು ಮಾಡಲಾಗಿತ್ತು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಮಿತ್ ಶಾ ಅವರು ರಾಜ್ಯಸಭೆಗೆ ಹಾಜರಾಗುವುದಕ್ಕೆ ಮುನ್ನ ವಿರೋಧ ಪಕ್ಷಗಳ ಹೆಚ್ಚಿನ ಸಂಖ್ಯೆಯ ಸಂಸದರನ್ನು ಅಮಾನತುಗೊಳಿಸಲಾಗುವುದು ಎಂದು ರಾಜ್ಯಸಭೆಯ ಸಭಾನಾಯಕ ಪೀಯೂಷ್ ಗೋಯಲ್ ಹೇಳಿದ್ದಾಗಿ ಟಿಎಂಸಿಯ ಸಂಸದರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದು ನಿಜವೇ ಆಗಿದ್ದಲ್ಲಿ, ಸಭಾಪತಿಯವರು ಈ ಬಗ್ಗೆ ತನಿಖೆ ನಡೆಸಬೇಕೆಂದು ಬಯಸುತ್ತೇವೆ ಎಂದಿದ್ದಾರೆ.
ಸಂಸದರ ಅಮಾನತು ಮೂಲಕ ಚರ್ಚೆಯಿಲ್ಲದೆಯೇ ಮಸೂದೆಗೆ ಅಂಗೀಕಾರ ಕೊಡಿಸಿ ಕಲಾಪವನ್ನು ಸುಗಮಗೊಳಿಸಿದ್ದೇನೆ ಎಂದು ಸಭಾಪತಿ ಭಾವಿಸಿರುವುದು ನಿರಾಶಾದಾಯಕಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.