ADVERTISEMENT

ಅರೆ ಸೇನಾ ಪಡೆಗಳ ಸಂಚಾರ: ಕಾಶ್ಮೀರದಲ್ಲಿ 'ಆತಂಕ‘ದ ಕಾರ್ಮೋಡ

ಚುನಾವಣೆಗಳಿಗೆ ನಿಯೋಜನೆಗೊಂಡ ಸೇನೆ ರಾಜ್ಯಕ್ಕೆ ಹಿಂತಿರುಗಿವೆ; ವದಂತಿಗಳಿಗೆ ತೆರೆ ಎಳೆದ ಪೊಲೀಸ್ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 9:09 IST
Last Updated 7 ಜೂನ್ 2021, 9:09 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಇತ್ತೀಚೆಗೆ ಕಾಶ್ಮೀರದಲ್ಲಿ ದಿನೇ ದಿನೇ ಅರೆ ಸೇನಾ ಪಡೆಗಳ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ‘ಕಣಿವೆ ರಾಜ್ಯದಲ್ಲಿ ಆಗಸ್ಟ್‌ 2019ರಲ್ಲಿಸಂಭವಿಸಿದಂತಹ ದೊಡ್ಡ ಘಟನೆಯೊಂದು ಮತ್ತೆ ಸಂಭವಿಸುವ ಸಾಧ್ಯತೆ ಇದೆ‘ ಎಂಬ ವದಂತಿಗಳು ದಟ್ಟವಾಗಿ ಮತ್ತು ವೇಗವಾಗಿ ಹರಿದಾಡುತ್ತಿವೆ.

ಕೇಂದ್ರ ಸರ್ಕಾರ 2019 ರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ವನ್ನು ಹಿಂತೆಗೆದುಕೊಳ್ಳುವ ಮೊದಲು ಕಾಶ್ಮೀರದಲ್ಲಿ ಇದೇ ರೀತಿಯ ವದಂತಿಗಳು ಹಬ್ಬಿದ್ದವು. ಸರ್ಕಾರ ಪ್ರತ್ಯೇಕ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ನಿರ್ಧಾರಕ್ಕೆ ಬರುವ 10 ದಿನಗಳ ಮೊದಲು ಕಣಿವೆ ರಾಜ್ಯದಲ್ಲಿ ಬೃಹತ್ ಭದ್ರತಾ ತುಕಡಿಗಳನ್ನು ನಿಯೋಜಿಸಲು ಪ್ರಾರಂಭಿಸಿತ್ತು.

ಈಗ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರೆ ಸೇನಾ ಪಡೆಗಳ ಯೋಧರು ಕೇಂದ್ರಾಡಳಿತ ಪ್ರದೇಶ ಕಾಶ್ಮೀರಕ್ಕೆ ಆಗಮಿಸಿದ್ದಾರೆ. ಈ ಸೇನಾಪಡೆಗಳಲ್ಲಿನ ಹೆಚ್ಚಿನ ಯೋಧರು ಉತ್ತರ ಕಾಶ್ಮೀರ ಮತ್ತು ಜಮ್ಮು ಪ್ರದೇಶದ ಕೆಲವು ಭಾಗಗಳಲ್ಲಿ ಸಂಚರಿಸುತ್ತಿದ್ದಾರೆ ಎಂಬ ವರದಿಗಳು ಹರಿದಾಡುತ್ತಿದೆ.

ADVERTISEMENT

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮನೆಯಿಂದ ಕಚೇರಿಗಳವರೆಗೆ, ಮಾರುಕಟ್ಟೆಯಿಂದ ಆಟದ ಮೈದಾನಗಳವರೆಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರು ‘ಕೇಂದ್ರ ಸರ್ಕಾರ ಪುನಃ 2019ರ ಆಗಸ್ಟ್‌ ನಂತಹ ಘಟನೆಗಿಂತ ದೊಡ್ಡದಾದ ಯಾವುದೋ ಯೋಜನೆಯೊಂದನ್ನು ಜಾರಿಗೆ ತರುವ ಸಾಧ್ಯತೆ ಇದೆ‘ ಎಂದು ಚರ್ಚಿಸುತ್ತಿದ್ದಾರೆ.

ಜನರ ಚರ್ಚೆಯಲ್ಲಿರುವ ಸಾಮಾನ್ಯ ವದಂತಿಯೆಂದರೆ; ಜಮ್ಮು ಪ್ರದೇಶಕ್ಕೆ ಪ್ರತ್ಯೇಕ ರಾಜ್ಯದ ಮಾನ್ಯತೆ ಯನ್ನು ಪುನಃ ನೀಡುವುದು. ಕಾಶ್ಮೀರವನ್ನು ಎರಡು ಅಥವಾ ಮೂರು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವುದು. ಕಾಶ್ಮೀರ ಪಂಡಿತರ ಬಹುದಿನಗಳ ಬೇಡಿಕೆಯಂತೆ ಕಣಿವೆ ಪ್ರದೇಶದಲ್ಲಿ ಪ್ರತ್ಯೇಕ ರಾಜ್ಯವನ್ನು ರಚಿಸುವುದು.

ಇಂಥ ವದಂತಿಗಳ ಕುರಿತು ಸಾಮಾನ್ಯ ಜನರು ಮಾತ್ರವಲ್ಲ, ಉನ್ನತ ರಾಜಕಾರಣಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.

2015-2018ರವರೆಗೆ ಪಿಡಿಪಿ ಮತ್ತು ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜಾದ್ ಲೋನ್ ಅವರು ‘ಇವೆಲ್ಲವನ್ನೂ ವದಂತಿಗಳೆಂದು ನಾವು ನಂಬುತ್ತೇವೆ. ನಾವು ವದಂತಿಗಳನ್ನು ಪ್ರೀತಿಸುತ್ತೇವೆ. ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ವದಂತಿಗಳು ಮತ್ತು ಪಿತೂರಿಗಳನ್ನು ಸರ್ಕಾರ ನಿರಾಕರಿಸುವವರೆಗೂ ಇವುಗಳನ್ನು ನಿಜವೆಂದು ನಂಬಬೇಡಿ‘ ಎಂದು ಟ್ವೀಟ್‌ ಮಾಡಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್‌ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆಪ್ತ ತನ್ವೀರ್ ಸಿದ್ದಿಕಿ, ತಮ್ಮನ್ನು ಪುನಃ ಬಂಧಿಸಬಹುದೆಂಬ ಭಯದಲ್ಲಿದ್ದಾರೆ. ಏಕೆಂದರೆ, 2019ರ ಆಗಸ್ಟ್‌ನಲ್ಲಿ ನಡೆದ ಘಟನೆಯಲ್ಲಿ ಸಿದ್ದಿಕಿ ಸೇರಿದಂತೆ ಹಲವು ಉನ್ನತ ಮಟ್ಟದ ನಾಯಕರನ್ನು ಬಂಧಿಸಲಾಗಿತ್ತು.

‘ವದಂತಿಗಳು ದಟ್ಟವಾಗಿ, ವೇಗವಾಗಿ ಹಬ್ಬುತ್ತಿರುವಾಗ ನಾವು ಎರಡನೇ ಹಂತದ ಸೆಮಿಸ್ಟರ್‌ಗೆ ಸಿದ್ಧರಾಗಬೇಕೆ ? ಎಂಎಲ್‌ಎ ಹಾಸ್ಟೆಲ್‌ 2?‘ ಎಂದು ಸಿದ್ದಿಕಿ ಟ್ವೀಟ್‌ ಮಾಡಿದ್ದಾರೆ.

ಈ ಎಲ್ಲ ವದಂತಿಗಳನ್ನು ತಳ್ಳಿಹಾಕಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ‘ಅರೆ ಸೇನಾ ಪಡೆಯ ಸುಮಾರು 100 ತುಕಡಿಗಳು, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳ ಚುನಾವಣಾ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿದ್ದವು. ಈ ತಂಡಗಳು 15 ದಿನಗಳ ಕಾಲ ಜಮ್ಮುವಿನಲ್ಲಿ ‘ಕ್ವಾರಂಟೈನ್‘ ಆಗಿ, ತಮ್ಮ ಸ್ವ ಸ್ಥಾನಗಳಿಗೆ ಹಿಂತಿರುಗುತ್ತಿವೆ.’ ಎಂದು ಸ್ಪಷ್ಟಪಡಿಸಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದಿಂದ ಸುಮಾರು 200 ಅರೆ ಸೇನಾಪಡೆಗಳ ತುಕಡಿಗಳನ್ನು ವಿಧಾನಸಭಾ ಚುನಾವಣೆ ನಡೆದ ರಾಜ್ಯಗಳಿಗೆ ಭದ್ರತೆಗಾಗಿ ಕಳುಹಿಸಲಾಗಿತ್ತು. ಅವರೆಲ್ಲ ವಾಪಸ್ ಆಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ತುಕಡಿಗಳು ವಾಪಸ್ ಬರುವ ನಿರೀಕ್ಷೆಯಿದೆ‘ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ಆರ್ಟಿಕಲ್ 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಮೊದಲು, ಅಂದರೆ 2019 ರ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳ ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.