ಶ್ರೀರಂಗಪಟ್ಟಣ (ಮಂಡ್ಯ): ಪಟ್ಟಣದ ಟಿಪ್ಪು (ಜಾಮಿಯಾ) ಮಸೀದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಮಂಗಳವಾರದಿಂದ ನ್ಯಾಯಾಂಗ ಬಂಧನದಲ್ಲಿದ್ದ ಅರಸೀಕರೆಯ ಕಾಳಿಕಾಶ್ರಮದ ಋಷಿಕುಮಾರ ಸ್ವಾಮೀಜಿ ಅವರಿಗೆ ಪಟ್ಟಣದ ಹೆಚ್ಚುವರಿ ಕಿರಿಯ ಶ್ರೇಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.
₹ 1 ಲಕ್ಷ ಮೌಲ್ಯದ ಬಾಂಡ್ ಜತೆಗೆ, ಪ್ರಕರಣದ ಸಾಕ್ಷಿಗಳನ್ನು ಬೆದರಿಸಬಾರದು ಎಂಬ ಷರತ್ತು ವಿಧಿಸಿ ನ್ಯಾಯಾಧೀಶರಾದ ಆಯೇಷಾ ಪಿ.ಮಜೀದ್ ಜಾಮೀನು ಮಂಜೂರು ಮಾಡಿದ್ದಾರೆ.
ಕೋಮು ಸಾಮರಸ್ಯ ಕದಡುವ ಹೇಳಿಕೆ ನೀಡಿದ್ದ ಆರೋಪದ ಮೇಲೆ ಪಟ್ಟಣ ಠಾಣೆ ಪೊಲೀಸರು ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿ ಮಂಗಳವಾರ ಬಂಧಿಸಿದ್ದರು.
ಸ್ವಾಮೀಜಿಗೆ ಜಾಮೀನು ನೀಡುವಂತೆ ಪಟ್ಟಣದ ವಕೀಲರಾದ ಎಸ್.ಆರ್.ಸಿದ್ದೇಶ್, ಟಿ.ಬಾಲರಾಜು ಮತ್ತು ಎ.ಟಿ.ಜಯಕುಮಾರ್ ನ್ಯಾಯಾಲಯಕ್ಕೆ ಕೋರಿಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಸ್ವಾಮೀಜಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಜಾಮೀನು ನೀಡುವ ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿತ್ತು.
‘ಸ್ವಾಮೀಜಿಗೆ ಜಾಮೀನು ಸಿಕ್ಕಿರುವುದು ಸಂತಸ ತಂದಿದೆ. ನ್ಯಾಯಾಲಯದ ಆದೇಶವನ್ನು ಮಂಡ್ಯ ಉಪ ಕಾರಾಗೃಹದ ಅಧೀಕ್ಷರಿಗೆ
ಇ– ಮೇಲ್ ಮೂಲಕ ಕಳುಹಿಸಲಾಗಿದೆ. ಬುಧವಾರ ರಾತ್ರಿಯ ಒಳಗೆ ಸ್ವಾಮೀಜಿ ಬಿಡುಗಡೆಯಾಗಲಿದ್ದಾರೆ’ ಎಂದು ವಕೀಲ ಟಿ.ಬಾಲರಾಜು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.