ADVERTISEMENT

ಭಾರತ ಬಯಸಿದ್ದನ್ನು ಪೂರೈಸುತ್ತೇವೆ: ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್

ಏಜೆನ್ಸೀಸ್
Published 1 ಏಪ್ರಿಲ್ 2022, 17:44 IST
Last Updated 1 ಏಪ್ರಿಲ್ 2022, 17:44 IST
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್‌
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ವಿದೇಶಾಂಗ ಸಚಿವ ಲಾವ್ರೋವ್‌    

ನವದೆಹಲಿ (ಪಿಟಿಐ/ರಾಯಿಟರ್ಸ್): ಭಾರತಕ್ಕೆ ಕಡಿಮೆ ಬೆಲೆಯಲ್ಲಿ ಕಚ್ಚಾತೈಲವನ್ನು ಪೂರೈಕೆ ಮಾಡುವ ಪ್ರಸ್ತಾವವನ್ನು ರಷ್ಯಾ ಮತ್ತೊಮ್ಮೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಂದೆ ಇರಿಸಿದೆ. ‘ಭಾರತವು ಏನು ಬಯಸು ತ್ತದೆಯೋ ಅದನ್ನು ಪೂರೈಸಲು ನಾವು ಸಿದ್ಧರಿದ್ದೇವೆ’ ಎಂದು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೊವ್ ಹೇಳಿದ್ದಾರೆ.

ರಷ್ಯಾ ಜತೆಗೆ ವ್ಯಾಪಾರ ವೃದ್ಧಿಸಿದರೆ ನಿರ್ಬಂಧ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಮತ್ತು ಬ್ರಿಟನ್ ನೀಡಿದ್ದ ಎಚ್ಚರಿಕೆಯ ಮಧ್ಯೆಯೂ ಭಾರತವು, ರಷ್ಯಾ ವಿದೇಶಾಂಗ ಸಚಿವಲಾವ್ರೊವ್ ಅವರನ್ನು ದೇಶಕ್ಕೆ ಬರಮಾಡಿಕೊಂಡಿದೆ. ಗುರುವಾರ ರಾತ್ರಿ ಭಾರತಕ್ಕೆ ಬಂದಿದ್ದ ಅವರು, ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿ ಜೈಶಂಕರ್ ಅವರ ಜತೆಗೆ ನಡೆದ ಮಾತುಕತೆಯ ವೇಳೆ ಅವರು ಕಚ್ಚಾತೈಲವನ್ನು ಕಡಿಮೆ ಬೆಲೆಗೆ ಪೂರೈಕೆ ಮಾಡುವ ಪ್ರಸ್ತಾವಕ್ಕೆ ಒತ್ತು ನೀಡಿದ್ದಾರೆ.

ಮಾತುಕತೆಯ ನಂತರ ಆಯ್ದ ಪತ್ರಕರ್ತರ ಜತೆಗೆ ಸಂವಾದ ನಡೆಸಿದ ಅವರು, ‘ಅಮೆರಿಕನ್ ಡಾಲರ್ ಮೂಲಕ ನಡೆಯುತ್ತಿರುವ ಸ್ವಿಫ್ಟ್‌ ವರ್ಗಾವಣೆ ವ್ಯವಸ್ಥೆಯನ್ನು ಬದಿಗಿರಿಸಿ, ಭಾರತದ ರೂಪಾಯಿ ಮತ್ತು ರಷ್ಯಾದ ರೂಬಲ್ ಮೂಲಕ ವಹಿವಾಟು ನಡೆಸುವ ತುರ್ತು ಇದೆ’ ಎಂದು ಹೇಳಿದ್ದಾರೆ.

ADVERTISEMENT

ರಷ್ಯಾ, ಉಕ್ರೇನ್‌ ಅನ್ನು ಅತಿಕ್ರಮಿಸಿದ ವಿಚಾರವಾಗಿ ಅಮೆರಿಕ ಮತ್ತು ನ್ಯಾಟೊ ಸದಸ್ಯ ದೇಶಗಳು ರಷ್ಯಾ ಮೇಲೆ ಆರ್ಥಿಕ ನಿರ್ಬಂಧ ಹೇರಿವೆ. ರಷ್ಯಾ ಜತೆಗೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ಮೇಲೆ ನಿರ್ಬಂಧ ಹೇರುವ ಎಚ್ಚರಿಕೆ ನೀಡಲಾಗಿದೆ. ಈ ಸಂಭಾವ್ಯ ನಿರ್ಬಂಧವನ್ನು ತಪ್ಪಿಸುವ ಸಲುವಾಗಿ ರೂಪಾಯಿ–ರೂಬಲ್ ಮೂಲಕ ವ್ಯಾಪಾರ ನಡೆಸುವ ಕ್ರಮಕ್ಕೆ ರಷ್ಯಾ ಒತ್ತಾಯಿಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

ರಷ್ಯಾ–ಉಕ್ರೇನ್‌ ಯುದ್ಧ ಆರಂಭವಾಗುವುದಕ್ಕೂ ಮುನ್ನ ಇದ್ದ ಬೆಲೆಯಲ್ಲಿ ಪ್ರತಿ ಬ್ಯಾರೆಲ್‌ಗೆ 35 ಡಾಲರ್‌ನಷ್ಟು ವಿನಾಯಿತಿಯಲ್ಲಿ ಕಚ್ಚಾತೈಲ ಪೂರೈಕೆ ಮಾಡುವ ಪ್ರಸ್ತಾವವನ್ನು ರಷ್ಯಾ ಭಾರತದ ಮುಂದೆ ಇರಿಸಿತ್ತು. ರಷ್ಯಾದ ಈ ಪ್ರಸ್ತಾವದ ಬೆನ್ನಲ್ಲೇ ಅಮೆರಿಕವು ಎಚ್ಚರಿಕೆ ನೀಡಿತ್ತು. ‘ರಷ್ಯಾ ಜತೆಗೆ ಈಗ ಇರುವ ವ್ಯಾಪಾರವನ್ನು ಮುಂದುವರಿಸು ವುದಕ್ಕೆ ಆಕ್ಷೇಪಗಳಿಲ್ಲ. ಬದಲಿಗೆ ವ್ಯಾಪಾರವನ್ನು ಹೆಚ್ಚಿಸಿದರೆ ನಿರ್ಬಂಧಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಅಮೆರಿಕವು ಗುರುವಾರವಷ್ಟೇ ಎಚ್ಚರಿಕೆ ನೀಡಿತ್ತು.

ರಷ್ಯಾದಿಂದ ಕಡಿಮೆ ಬೆಲೆಗೆ ಕಚ್ಚಾತೈಲ ಖರೀದಿಸುವ ಸಂಬಂಧ ಭಾರತ ಮತ್ತು ರಷ್ಯಾದ ಉನ್ನತಾಧಿಕಾರಿ ಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿದ್ದವು. ಇದಕ್ಕೆ ಬ್ರಿಟನ್ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಗುರುವಾರ ಭಾರತಕ್ಕೆ ಭೇಟಿ ನೀಡಿದ್ದ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಲಿಸ್ ಟ್ರಸ್ ಅವರು, ರಷ್ಯಾದಿಂದ ಕಚ್ಚಾತೈಲ ಖರೀದಿಸದಂತೆ ಹೇಳಿದ್ದರು. ಅವರೊಂದಿಗೆ ಮಾತುಕತೆಯಲ್ಲಿದ್ದ ವಿದೇಶಾಂಗ ಸಚಿವ ಎಸ್‌.ಜೈಶಂಕರ್, ಈ ಒತ್ತಾಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ದ್ದರು.

‘ರಷ್ಯಾದಿಂದ ಹೆಚ್ಚಿನ ಕಚ್ಚಾತೈಲ ಖರೀದಿಸುತ್ತಿರುವ ಮೊದಲ 10 ದೇಶ ಗಳು ಯೂರೋಪ್‌ನಲ್ಲಿಯೇ ಇವೆ. ಯುದ್ಧ ಆರಂಭವಾದ ನಂತರ ಈ ದೇಶಗಳು ರಷ್ಯಾದಿಂದ ಖರೀದಿಸಿದ ಕಚ್ಚಾತೈಲದ ಪ್ರಮಾಣದಲ್ಲಿ ಶೇ 15ರಷ್ಟು ಏರಿಕೆಯಾಗಿದೆ. ಮುಂದಿನ ಆರು ತಿಂಗಳ ನಂತರವೂ ಪರಿಸ್ಥಿತಿ ಹೀಗೇ ಇರಲಿದೆ’ ಎಂದು ಜೈಶಂಕರ್ ಕಟುಮಾತುಗಳಿಂದ ಉತ್ತರ ನೀಡಿದ್ದಾರೆ.ಜತೆಗೆ, ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವ ಆಯ್ಕೆ ಯನ್ನು ಭಾರತ ಮುಕ್ತವಾಗಿ ಇರಿಸಿ ಕೊಂಡಿದೆ ಎಂಬ ಸಂದೇಶವನ್ನು ಬ್ರಿಟನ್‌ ವಿದೇಶಾಂಗ ಕಾರ್ಯದರ್ಶಿಗೆ ನೀಡಿ ದ್ದರು. ಇದರ ಬೆನ್ನಲ್ಲೇ ರಷ್ಯಾ ವನ್ನು ನಂಬಲು ಸಾಧ್ಯವಿಲ್ಲ ಎಂದು ಅಮೆರಿಕವು ಶುಕ್ರವಾರ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಆದರೆ ಭಾರತದ ನಿಲುವನ್ನು ಗೌರವಿಸುತ್ತೇವೆ ಎಂದು ಬ್ರಿಟನ್ ಹೇಳಿದೆ.

***

ರಷ್ಯಾ ವಿರುದ್ಧ ಹೇರಲಾಗಿರುವ ನಿರ್ಬಂಧಗಳನ್ನು ಅನುಷ್ಠಾನಕ್ಕೆ ತರಬೇಕಾದದ್ದು ನಮ್ಮೆಲ್ಲರ ಹೊಣೆ. ರಷ್ಯಾದ ಮೇಲಿನ ಕಚ್ಚಾತೈಲ ಅವಲಂಬನೆ ತಗ್ಗಿಸಬೇಕು

- ಲಿಸ್ ಟ್ರಸ್, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ

***

ನಾವು ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಆರಂಭಿಸಿದ್ದೇವೆ. ಇದನ್ನು ಮುಂದುವರೆಸುತ್ತೇವೆ. ದೇಶದ ಜನತೆಗೆ ಯಾವುದು ಒಳಿತೋ ಅದನ್ನು ಮಾಡುತ್ತೇವೆ

- ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.