ADVERTISEMENT

ಶಬರಿಗಿರಿ: ಸ್ತ್ರೀ ಪ್ರವೇಶಕ್ಕಿಲ್ಲ ಸಹಮತ

ಕೇರಳ ಮುಖ್ಯಮಂತ್ರಿ ನೇತೃತ್ವದ ಸರ್ವಪಕ್ಷ ಸಭೆ ವಿಫಲ: ಇಂದು ತೆರೆಯಲಿದೆ ದೇಗುಲ

ಪಿಟಿಐ
Published 15 ನವೆಂಬರ್ 2018, 20:00 IST
Last Updated 15 ನವೆಂಬರ್ 2018, 20:00 IST
ILES-
ILES-   

ತಿರುವನಂತಪುರ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪು ಜಾರಿಯ ಬಗ್ಗೆ ಗುರುವಾರ ನಡೆದ ಸರ್ವ ಪಕ್ಷ ಸಭೆ ವಿಫಲವಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿ ಮಾಡುವುದು ತಮ್ಮ ಕರ್ತವ್ಯ ಎಂಬ ನಿಲುವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸಡಿಲಿಸಲಿಲ್ಲ. ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರತಿನಿಧಿಗಳು ಸಭಾತ್ಯಾಗ ಮಾಡಿದರು.

ಸುಪ್ರೀಂ ಕೋರ್ಟ್‌ ತೀರ್ಪು ಮರುಪರಿಶೀಲಿಸುವಂತೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದಿನ ವರ್ಷ ಜನವರಿ 22ರಂದು ನಡೆಯಲಿದೆ. ಅಲ್ಲಿಯವರೆಗೆ ತೀರ್ಪು ಜಾರಿ ಪ್ರಯತ್ನವನ್ನು ಸ್ಥಗಿತಗೊಳಿಸಬೇಕು ಎಂಬುದು ಈ ಪಕ್ಷಗಳ ವಾದವಾಗಿತ್ತು.

ಸೆ. 28ರಂದು ನೀಡಿದ ತೀರ್ಪಿಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ಕೊಟ್ಟಿಲ್ಲ. ಹಾಗಿರುವಾಗ ತೀರ್ಪು ಜಾರಿ ಮಾಡದಿರಲು ಸಾಧ್ಯವಿಲ್ಲ ಎಂದು ವಿಜಯನ್‌ ಹೇಳಿದರು.

ADVERTISEMENT

ಸುಮಾರು ಮೂರು ತಾಸು ನಡೆದ ಸಭೆಯಲ್ಲಿ ಸಹಮತಕ್ಕೆ ಬರುವುದಕ್ಕೆ ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಮತ್ತು ಬಿಜೆಪಿ ಪ್ರತಿನಿಧಿಗಳು ಸಭೆಯ ಕೊನೆಯ ಹೊತ್ತಿಗೆ ಸಭಾತ್ಯಾಗ ಮಾಡಿದರು.

62 ದಿನಗಳ ಮಂಡಲ ಪೂಜೆ–ಮಕರ ಬೆಳಕು ವಾರ್ಷಿಕ ತೀರ್ಥಯಾತ್ರೆಗಾಗಿ ಶುಕ್ರವಾರ ದೇಗುಲದ ಬಾಗಿಲು ತೆರೆಯಲಾಗುವುದು. ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ಮೂರನೇ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ. ಹಿಂದೆ ಎರಡು ಬಾರಿ ಬಾಗಿಲು ತೆರೆದಾಗಲೂ ದೇವಾಲಯ ಪ್ರವೇಶಿಸಲು ಕೆಲವು ಮಹಿಳೆಯರು ಪ್ರಯತ್ನಿಸಿದ್ದರು. ಆದರೆ, ಭಕ್ತರು ಮತ್ತು ಪ್ರತಿಭಟನಕಾರರ ಪ್ರತಿರೋಧದಿಂದಾಗಿ ಈವರೆಗೆ ದೇಗಲು ಪ್ರವೇಶಿಸಲು ಮಹಿಳೆಯರಿಗೆ ಸಾಧ್ಯವಾಗಿಲ್ಲ.

ಸರ್ಕಾರವು ಭಕ್ತರ ಜತೆಗಿದೆ. ಹಾಗಾಗಿ ಯಾರೂ ಕಳವಳಪ‍ಡುವ ಅಗತ್ಯ ಇಲ್ಲ ಎಂದು ವಿಜಯನ್‌ ಭರವಸೆ ಕೊಟ್ಟಿದ್ದಾರೆ. ಎಲ್ಲ ಭಕ್ತರಿಗೂ ಭದ್ರತೆ ಒದಗಿಸಲಾಗುವುದು. ಸರ್ಕಾರವು ಸುಪ್ರೀಂ ಕೋರ್ಟ್‌ ತೀರ್ಪನ್ನು ಅನುಸರಿಸಲೇಬೇಕಾಗುತ್ತದೆ. ಇದನ್ನು ಭಕ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಆದರೆ, ಸರ್ಕಾರ ಹಟಮಾರಿಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ತೀರ್ಪು ಜಾರಿ ಮಾಡುವ ವಿಚಾರದಲ್ಲಿ ಸರ್ಕಾರವು ಯಾವುದೇ ರಾಜಿಗೆ ಸಿದ್ಧವಿಲ್ಲ, ಹಟ ಹಿಡಿದು ಕೂತಿದೆ. ಶಬರಿಮಲೆ ತೀರ್ಥಯಾತ್ರೆಯನ್ನು ದುರ್ಬಲಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ಭಕ್ತರಿಗೆ ದೊಡ್ಡ ಸವಾಲು ಎಂದು ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಹೇಳಿದ್ದಾರೆ.

ಸಭೆಯಿಂದಾಗಿ ಸಮಯ ಹಾಳಾಗಿದ್ದಷ್ಟೇ ಲಾಭ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪಿ.ಎಸ್‌. ಶ್ರೀಧರನ್‌ ಪಿಳ್ಳೆ ಹೇಳಿದ್ದಾರೆ.

ವಾರ್ಷಿಕ ತೀರ್ಥಯಾತ್ರೆ

*ಶುಕ್ರವಾರ ಸಂಜೆ ತೆರೆಯಲಿದೆ ದೇಗುಲದ ಬಾಗಿಲು

* ಶುಕ್ರವಾರ ಪೂಜೆ ಮಾತ್ರ, ಭಕ್ತರಿಗೆ ಪ್ರವೇಶ ಇಲ್ಲ, ಶನಿವಾರದಿಂದ ಭಕ್ತರು ಹೋಗಬಹುದು

* ಡಿಸೆಂಬರ್‌ 27ರಿಂದ ಮೂರು ದಿನ ದೇಗುಲ ಬಾಗಿಲು ಮುಚ್ಚಲಾಗುವುದು

* ಡಿಸೆಂಬರ್‌ 30ರಿಂದ 2019ರ ಜನವರಿ 20ರವರೆಗೆ ಮತ್ತೆ ತೆರೆದಿರಲಿದೆ

* 500ಕ್ಕೂ ಹೆಚ್ಚು ಮಹಿಳೆಯರು ದೇಗುಲ ಪ್ರವೇಶಕ್ಕೆ ಅನುಮತಿಗಾಗಿ ಅರ್ಜಿಹಾಕಿದ್ದಾರೆ ಎಂದು ತಿಳಿದು ಬಂದಿದೆ

ಮಕರ ಬೆಳಕು

ಮಕರ ಬೆಳಕು ಕಾಣುವ ಸಂದರ್ಭ ಶಬರಿಮಲೆಯ ಅತ್ಯಂತ ಮಹತ್ವದ ದಿನ. ಈ ಬಾರಿ 2019ರ ಜನವರಿ 14ರಂದು ಮಕರ ಬೆಳಕು ಕಾಣಿಸಲಿದೆ. ಶಬರಿಮಲೆಯ ಒಂಬತ್ತು ಸ್ಥಳಗಳಿಂದ ಮಕರ ಬೆಳಕು ನೋಡಬಹುದು. ಅಂದು ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ ಇದೆ.

ಪ್ರವೇಶ ಅನುಮಾನ?

ಈ ಬಾರಿ ಮಹಿಳೆಯರಿಗೆ ಪ್ರವೇಶದ ಅವಕಾಶ ದೊರೆಯಬಹುದೇ ಎಂಬ ಬಗ್ಗೆ ಯಾವ ಸ್ಪಷ್ಟತೆಯೂ ಇಲ್ಲ. ಸರ್ವಪಕ್ಷ ಪ್ರತಿನಿಧಿಗಳು, ಪಂದಳಂ ರಾಜ ಕುಟುಂಬ ಹಾಗೂ ಅರ್ಚಕರ ಕುಟುಂಬದ ಜತೆ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಯಾವ ತೀರ್ಮಾನವೂ ಆಗಿಲ್ಲ.

ನೂರಾರು ಪೊಲೀಸರು ಈಗಾಗಲೇ ತಳ ಶಿಬಿರ ನಿಲಕ್ಕಲ್‌ಗೆ ಬಂದಿದ್ದಾರೆ. ಋತುಸ್ರಾವದ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನಕಾರರು ಶಪಥ ಮಾಡಿದ್ದಾರೆ.

* ಸರ್ಕಾರ ಪಟ್ಟು ಹಿಡಿದಿಲ್ಲ. ತೀರ್ಪು ಜಾರಿ ಅನಿವಾರ್ಯ. ಸುಪ್ರೀಂ ಕೋರ್ಟ್‌ ಮುಂದೆ ಇದಕ್ಕಿಂತ ಭಿನ್ನವಾದ ತೀರ್ಪು ಕೊಟ್ಟರೆ ಆ ತೀರ್ಪನ್ನೂ ಸರ್ಕಾರ ಜಾರಿಗೊಳಿಸಲಿದೆ

-ಪಿಣರಾಯಿ ವಿಜಯನ್‌,ಕೇರಳ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.