ADVERTISEMENT

ರಕ್ಷಣೆ ನೀಡದಿದ್ದರೂ ಶಬರಿಮಲೆ ತಲುಪುತ್ತೇನೆ ಎಂದಿದ್ದ ದೇಸಾಯಿಗೆ ಪ್ರತಿಭಟನೆಯ ಬಿಸಿ

ಏಜೆನ್ಸೀಸ್
Published 16 ನವೆಂಬರ್ 2018, 5:21 IST
Last Updated 16 ನವೆಂಬರ್ 2018, 5:21 IST
   

ಕೊಚ್ಚಿ: ‘ಒಂದುವೇಳೆ ಕೇರಳ ಸರ್ಕಾರವು ಸೂಕ್ತ ಭದ್ರತೆ ನೀಡದಿದ್ದರೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಿಸುತ್ತೇನೆ’ ಎಂದಿದ್ದ ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ಅವರಿಗೆ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆಯ ಬಿಸಿ ತಟ್ಟಿದೆ.

ಎರಡು ತಿಂಗಳ ಅವಧಿಯ ವಾರ್ಷಿಕ ಯಾತ್ರಾ ಋತು ‘ಮಂಡಲ ಮಕರವಿಲಕ್ಕು’ ನವೆಂಬರ್‌ 17ರಿಂದ ಆರಂಭವಾಗಲಿದ್ದು ಶುಕ್ರವಾರ (ನ.16ರ) ಸಂಜೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಹೀಗಾಗಿ ದೇವಾಲಯಕ್ಕೆ ಪ್ರವೇಶಿಸುವ ಸಲುವಾಗಿ ಬೆಳಿಗ್ಗೆ 4.30ರ ಸುಮಾರಿಗೆ ವಿಮಾನ ನಿಲ್ದಾಣ ತಲುಪಿದರು.

ಅಷ್ಟೊತ್ತಿಗಾಗಲೇ ಬಿಜೆಪಿ ಕಾರ್ಯಕರ್ತರನ್ನೊಳಗೊಂಡಂತೆಬೃಹತ್‌ ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ತೃಪ್ತಿ ಹಾಗೂ ಅವರ ತಂಡದ ಆರು ಜನರು ದೇವಾಲಯ ಪ್ರವೇಶಿಸಲು ಬಿಡುವುದಿಲ್ಲ ಎಂದು ಘೋಷಣೆ ಕೂಗಿದರು. ಮುಂಜಾಗ್ರತೆಯಾಗಿ ನಿಲ್ದಾಣದ ಬಳಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ.

ADVERTISEMENT

ದೇಸಾಯಿ ಹಾಗೂ ತಂಡವನ್ನು ಕರೆದೊಯ್ಯಲುವಿಮಾನ ನಿಲ್ದಾಣದಲ್ಲಿನಟ್ಯಾಕ್ಸಿ ಚಾಲಕರೂ ನಿರಾಕರಿಸಿದ್ದಾರೆ. ಆದರೆ, ದೇವಾಲಯ ಪ್ರವೇಶಿಸದೆ ಹಿಂದಿರುಗುವ ಮಾತೇ ಇಲ್ಲ ಎಂದು ದೇಸಾಯಿ ಪಟ್ಟು ಹಿಡಿದಿದ್ದಾರೆ.

ಮಂಡಲ ಪೂಜೆಯ ಸಂಭ್ರಮದ ಕಾಲದಲ್ಲಿಯೇ ಮಹಿಳೆಯರ ಗುಂಪಿನೊಂದಿಗೆ ನಾನು ದೇವಾಲಯ ಪ್ರವೇಶಿಸುತ್ತೇನೆ ಎಂದು ಹೇಳಿಕೆ ನೀಡಿದ್ದ ದೇಸಾಯಿ, ಈಗಾಗಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ಪತ್ರ ಬರೆದು ರಕ್ಷಣೆ ಕೋರಿದ್ದಾರೆ.

ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸೆಪ್ಟೆಂಬರ್‌ 28ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಕೇರಳದಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ತೀರ್ಪು ಪುನರ್‌ ಪರಿಶೀಲನೆಗೆ ಸಂಬಂಧಿಸಿದಂತೆ49 ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ವಿಚಾರಣೆಯನ್ನು 2019ರ ಜನವರಿ 22ಕ್ಕೆ ಮುಂದೂಡಿರುವ ಸುಪ್ರೀಂ,ಸೆಪ್ಟೆಂಬರ್‌28ರ ತೀರ್ಪಿಗೆ ತಡೆ ನೀಡುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.

ದೇಸಾಯಿ ಅವರು ಮಹಿಳೆಯರಿಗೆ ಪ್ರವೇಶ ನಿರಾಕರಿಸಿದ್ದಮಹಾರಾಷ್ಟ್ರದ ಶನಿ ಶಿಂಗ್ನಾಪುರ ದೇವಾಲಯದ 60 ವರ್ಷಗಳ ಸಂಪ್ರದಾಯದ ವಿರುದ್ಧ2016ರಲ್ಲಿ ಹೋರಾಟ ನಡೆಸಿದ್ದರು. ಅವರ ಹೋರಾಟದ ಬಳಿಕ ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಇದು ಹಲವು ಹೋರಾಟಗಳಿಗೆ ಪ್ರೇರಣೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.