ADVERTISEMENT

ಶಬರಿಮಲೆ: 200 ವರ್ಷಗಳ ಹಿಂದೆಯೇ ಮಹಿಳೆಯರಿಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2018, 19:46 IST
Last Updated 23 ನವೆಂಬರ್ 2018, 19:46 IST
   

ತಿರುವನಂತಪುರ: ಶಬರಿಮಲೆ ದೇವಾಲಯಕ್ಕೆ ಋತುಸ್ರಾವದ ವಯಸ್ಸಿನ ಮಹಿಳೆಯರ ಪ್ರವೇಶವನ್ನು ನಿರಾಕರಿಸುವ ಪದ್ಧತಿ 200 ವರ್ಷಗಳ ಹಿಂದೆಯೇ ಇತ್ತು ಎಂಬ ಮಾಹಿತಿಯು ಬ್ರಿಟಿಷ್ ಅಧಿಕಾರಿಗಳ ಅಧ್ಯಯನ ವರದಿಯಲ್ಲಿ ಇದೆ.

ಮದ್ರಾಸ್ ಪ್ರೆಸಿಡೆನ್ಸಿಯ ಲೆಫ್ಟಿನೆಂಟ್‌ಗಳಾಗಿದ್ದ ಬೆಂಜಮಿನ್ ಸ್ವೇನ್ ವಾರ್ಡ್ ಮತ್ತು ಪೀಟರ್ ಈರ್ ಕೊನ್ನೆರ್ 1815ರಿಂದ 1820ರವರೆಗೆ ತಿರುವಾಂಕೂರು ಮತ್ತು ಕೊಚ್ಚಿ ಸಂಸ್ಥಾನಗಳ ಬಗ್ಗೆ ಅಧ್ಯಯನ ನಡೆಸಿದ್ದರು. ಆ ಅಧ್ಯಯನದ ವರದಿಯು ‘ಮೆಮೊರ್ ಆಫ್ ದಿ ಸರ್ವೆ ಆಫ್‌ ದಿ ತಿರುವಾಂನಕೂರು ಅಂಡ್ ಕೊಚ್ಚಿ ಸ್ಟೇಟ್ಸ್’ ಎಂಬ ಹೆಸರಿನಲ್ಲಿ 1893 ಮತ್ತು 1903ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾಗಿದ್ದವು.

‘ಚಿಕ್ಕ ವಯಸ್ಸಿನ ಬಾಲಕಿಯರು ಮತ್ತು ಹಿರಿಯ ಮಹಿಳೆಯರು ಶಬರಿಮಲೆ ದೇವಾಲಯವನ್ನು ಪ್ರವೇಶಿಸಬಹುದಿತ್ತು. ಆದರೆ ಋತುಸ್ರಾವದ ವಯಸ್ಸಿನ ಮಹಿಳೆಯರು ದೇವಾಲಯವನ್ನು ಪ್ರವೇಶಿಸುವಂತಿರಲಿಲ್ಲ’ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

‘ಶಬರಿಮಲೆಗೆ ಮಹಿಳೆಯರು ಪ್ರವೇಶಿಸಲು ಅವಕಾಶ ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ನ ಐದು ಸದಸ್ಯರ ಪೀಠವು ತೀರ್ಪು ನೀಡಿತ್ತು. ಆದರೆ ಆ ಪೀಠದಲ್ಲಿದ್ದ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಮಾತ್ರ ಈ ತೀರ್ಪಿಗಿಂತ ಭಿನ್ನವಾದ ತೀರ್ಪು ನೀಡಿದ್ದರು. ವಾರ್ಡ್ ಮತ್ತು ಕೊನ್ನೆರ್ ಅವರ ವರದಿಗಳನ್ನು ಮಲ್ಹೋತ್ರಾ ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದರು.

‘ಇಲ್ಲಿ ಬಹಳ ಹಿಂದಿನಿಂದಲೂ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ. ಅದು ಅನಧಿಕೃತ ಮತ್ತು ಅಲಿಖಿತ ನಿಯಮ.‘ಶಬರಿಮಲೆಯಲ್ಲಿ ಜಾರಿಯಲ್ಲಿರುವ ಸಂಪ್ರದಾಯವನ್ನು ಅನುಕರಿಸಬೇಕು’ ಎಂದು 1991ರಲ್ಲಿ ಕೇರಳ ಹೈಕೋರ್ಟ್‌ ತೀರ್ಪು ನೀಡಿತ್ತು. ಅಲ್ಲಿಯವರೆಗೆ ಈ ನಿಷೇಧ ಅಲಿಖಿತವೇ ಆಗಿತ್ತು’ ಎಂದು ಇತಿಹಾಸತಜ್ಞ ಎಂ.ಜಿ.ಶಶಿಭೂಷಣ್ ವಿವರಿಸಿದ್ದಾರೆ.

ಭಿನ್ನ ಹೇಳಿಕೆಗಳು...

ಋತುಸ್ರಾವದ ವಯಸ್ಸಿನ ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸಿದ್ದರ ಬಗ್ಗೆ ಈ ದಾಖಲೆಗಳು ಮಾಹಿತಿ ನೀಡಿವೆ. ಆದರೆ ಈ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸಿದ್ದರ ಬಗ್ಗೆಹಲವರು ಬಹಿರಂಗಪಡಿಸಿದ್ದಾರೆ.

‘ನನ್ನ ಅನ್ನಪ್ರಾಶಾನ ನಡೆದದ್ದು ಶಬರಿಮಲೆಯಲ್ಲಿ. ಆಗ ನಾನು ನನ್ನ ತಾಯಿಯ ತೊಡೆ ಮೇಲೆ ಕೂತಿದ್ದೆ’ ಎಂದುಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಗಾರರಾಗಿದ್ದ ಎ.ಕೆ.ನಾಯರ್ ಈ ಹಿಂದೆ ಹೇಳಿದ್ದರು.

‘ನಾನು ನನ್ನ 27ನೇ ವಯಸ್ಸಿನಲ್ಲಿ ಶಬರಿಮಲೆ ದೇವಾಲಯಕ್ಕೆ ಹೋಗಿದ್ದೆ. ಅಯ್ಯಪ್ಪನ ಪಾದವನ್ನು ಮುಟ್ಟಿ ನಮಸ್ಕರಿಸಿದ್ದೆ’ ಎಂದುಕನ್ನಡ ನಟಿ ಮತ್ತು ಸಚಿವೆ ಜಯಮಾಲಾ ಹೇಳಿದ್ದರು. ಈ ಎರಡೂ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.