ADVERTISEMENT

ಶಬರಿಗಿರಿಗೆ ನಾರಿ ಪ್ರವೇಶ: ಜ.17ಕ್ಕೆ ವಕೀಲರ ಸಭೆಗೆ ಸುಪ್ರೀಂ ಕೋರ್ಟ್‌ ಸೂಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜನವರಿ 2020, 6:58 IST
Last Updated 13 ಜನವರಿ 2020, 6:58 IST
   

ನವದೆಹಲಿ: ಅಯ್ಯಪ್ಪಸ್ವಾಮಿ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡಿದ್ದ ತೀರ್ಪಿಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ‍‍ಪರಿಶೀಲನೆಗೆ ಸುಪ್ರಿಂ ಕೋರ್ಟ್‌ 9 ಸದಸ್ಯರ ಪೀಠ ರಚಿಸಲು ವಿಸ್ತೃತ ಪೀಠ ರಚಿಸಿದೆ.

ಮುಖ್ಯ ನ್ಯಾಯಮೂರ್ತಿ ಬೊಬ್ಡೆ ನೇತೃತ್ವದ ಈ ಪೀಠವು ಸೋಮವಾರದಿಂದ (ಜ.13) ವಿಚಾರಣೆ ಆರಂಭಿಸಲಿದೆ. ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಲ್ಲಿ ಇದನ್ನು ದಾಖಲಿಸಲಾಗಿದೆ. ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ 2018ರಲ್ಲಿ ನೀಡಿದ್ದ ತೀರ್ಪು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

ವಿಚಾರಣೆಯ ಮುಖ್ಯಾಂಶಗಳುಇಲ್ಲಿದೆ...

ADVERTISEMENT

12.27- ಜನವರಿ 17ಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ವಕೀಲರ ಸಭೆ. ವಾದ–ಪ್ರತಿವಾದ ಆಲಿಸುವ ಕ್ರಮದ ಬಗ್ಗೆ ನಿರ್ಧಾರ.

12.20- ಅಯೋಧ್ಯೆ ಪ್ರಕರಣದಲ್ಲಿ ವಕೀಲರಾದ ರಾಜೀವ್ ಧವನ್ ಮತ್ತು ವೈದ್ಯನಾಥನ್ ಅತ್ಯುತ್ತಮ ಕೆಲಸ ಮಾಡಿದರು. ಶಬರಿಮಲೆ ವಿಚಾರದಲ್ಲಿ ಅದೇ ಮಾದರಿ ಅನುಸರಿಸೋಣ. ತಾವು ವಾದಿಸುವ ವಿಚಾರದ ಬಗ್ಗೆ ವಕೀಲರು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳಲಿ ಎಂದು ಮುಖ್ಯ ನ್ಯಾಯಮೂರ್ತಿ ಸಲಹೆ ನೀಡಿದರು.

12.18- ಅರ್ಜಿಗಳಲ್ಲಿ ಉಲ್ಲೇಖಿಸಿರುವ ಎಲ್ಲ ವಿಚಾರಗಳ ಬಗ್ಗೆಯೂ ನ್ಯಾಯಪೀಠವು ವಾದ–ಪ್ರತಿವಾದಗಳನ್ನು ಆಲಿಸಲಿದೆ ಎಂದು ಸಿಜೆ ಭರವಸೆ ನೀಡಿದರು.

11.57- ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅಸ್ತು ಎಂದ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ 50ಕ್ಕೂ ಹೆಚ್ಚು ಮರುಪರಿಶೀಲನಾ ಅರ್ಜಿಗಳು ದಾಖಲಾಗಿವೆ. ಈ ಎಲ್ಲ ಅರ್ಜಿಗಳ ಜೊತೆಗೆ ಮಸೀದಿಗಳಿಗೆ ಮಹಿಳೆಯರ ಪ್ರವೇಶ, ದಾವೂದಿ ಬೊರ್ಹಾ ಸಮುದಾಯದಲ್ಲಿ ಮಹಿಳೆಯರ ಜನನಾಂಗ ಛೇದನ ಮತ್ತು ಪಾರ್ಸಿ ಮಹಿಳೆಯರಿಗೆ ಪವಿತ್ರ ಅಗ್ನಿ ಇರುವ ಸ್ಥಳಕ್ಕೆ ಪ್ರವೇಶದ ಬಗ್ಗೆಯೂ ವಿಚಾರಣೆ ನಡೆಸಲು ನ್ಯಾಯಪೀಠ ಆಲೋಚಿಸುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಬೊಬ್ಡೆ ನುಡಿದರು.

11.52-ವಿಚಾರಣೆಯ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಪರ–ವಿರೋಧ ಇರುವವರಿಗೆ ಸುಪ್ರೀಂ ಕೋರ್ಟ್‌ 3 ವಾರಗಳ ಕಾಲಾವಕಾಶ ನೀಡಿದೆ. ಜ.17ರಂದು ಸೆಕ್ರೆಟರಿ ಜನರಲ್ ಸಭೆ ಕರೆಯಲಿದ್ದಾರೆ. ಪ್ರಕರಣದ ವ್ಯಾಪ್ತಿಗೆಯಾವುದೇ ವಿಷಯವನ್ನು ಸೇರಿಸಬೇಕು ಅಥವಾ ಮರುರೂಪಿಸಬೇಕು ಎಂಬ ಬಗ್ಗೆ ಅಷ್ಟರೊಳಗೆ ಕಕ್ಷಿದಾರರು ಸುಪ್ರೀಂ ಕೋರ್ಟ್‌ ಗಮನಕ್ಕೆ ತರಬೇಕು.

11.46- ಈ ಹಿಂದೆ ಶಬರಿಮಲೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಸೂಚಿಸಿದ ವಿಚಾರಗಳ ಬಗ್ಗೆ ಚರ್ಚಿಸಲು ವಾದಿ–ಪ್ರತಿವಾದಿಗಳ ಸಭೆ ಕರೆಯುವಂತೆ ಮುಖ್ಯ ನ್ಯಾಯಮೂರ್ತಿ ಸಲಹೆ. ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ಗೆ ಸಭೆ ಕರೆಯಲು ಸೂಚನೆ.

11:38- ವಿಚಾರಣೆ ಆರಂಭ. ಐವರು ಸದಸ್ಯರ ನ್ಯಾಯಪೀಠವು ವರ್ಗಾಯಿಸಿದ ವಿಚಾರಗಳನ್ನು ಮಾತ್ರ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ

ನ್ಯಾಯಪೀಠದಲ್ಲಿರುವ ನ್ಯಾಯಮೂರ್ತಿಗಳು

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಮೇಲ್ಮನವಿಗಾಗಿ ಸಲ್ಲಿಸಿರುವ ಅರ್ಜಿಗಳನ್ನುಏಳು ಅಥವಾ ಅದಕ್ಕಿಂತ ಹೆಚ್ಚು ಸದಸ್ಯರುಳ್ಳ ಪೀಠ ಪರಿಶೀಲಿಸಬೇಕು ಎಂದು ಐವರು ಸದಸ್ಯರಿದ್ದ ಪೀಠ ಕಳೆದ ನ.14ರಂದು ಶಿಫಾರಸು ಮಾಡಿತ್ತು. ಅರ್ಜಿಗಳ ವಿಚಾರಣೆ ಬಾಕಿ ಇರುವುದರಿಂದಾಗಿ, 2018ರ ತೀರ್ಪು ಅಂತಿಮವಲ್ಲ ಎಂದು ಸುಪ್ರೀಂ ಕೋರ್ಟ್ ಎರಡು ಬಾರಿ ಮೌಖಿಕವಾಗಿ ತಿಳಿಸಿತ್ತು.

ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಆರ್.ಭಾನುಮತಿ, ಅಶೋಕ್ ಭೂಷಣ್, ಎಲ್.ನಾಗೇಶ್ವರ ರಾವ್, ಮೋಹನ್ ಎಂ.ಶಾಂತನಗೌಡರ್, ಎಸ್.ಅಬ್ದುಲ್ ನಜೀರ್, ಆರ್.ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್‌ ವಿಸ್ತೃತ ನ್ಯಾಯಪೀಠದಲ್ಲಿದ್ದಾರೆ.

ಈ ಹಿಂದೆ ಶಬರಿಮಲೆಗೆ ಸಂಬಂಧಿಸಿದ ಪ್ರಧಾನ ಅರ್ಜಿ ಮತ್ತು ಮರುಪರಿಶೀಲನಾ ಅರ್ಜಿಗಳವಿಚಾರಣೆ ನಡೆಸಿದ್ದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರಿಮನ್, ಎ.ಎಂ.ಖಾನ್‌ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರ ಅವರು ವಿಸ್ತೃತ ನ್ಯಾಯಪೀಠದಲ್ಲಿ ಇಲ್ಲ.

ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಬಹುಮತದತೀರ್ಪು ನೀಡಿದ ನ್ಯಾಯಪೀಠವು, ಸಂವಿಧಾನದ 14ನೇ ಪರಿಚ್ಛೇದ (ಕಾನೂನಿನ ಎದುರು ಎಲ್ಲರೂ ಸಮಾನರು), 25 ಮತ್ತು 26ನೇ ಪರಿಚ್ಛೇದಗಳ (ಧಾರ್ಮಿಕ ಸ್ವಾತಂತ್ರ್ಯ) ಅನ್ವಯ ಶಬರಿಮಲೆ ಪ್ರಕರಣವನ್ನು ಕೂಲಂಕಶವಾಗಿಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟು ವಿಸ್ತೃತಪೀಠಕ್ಕೆ ವರ್ಗಾಯಿಸಿತ್ತು.

ಪ್ರಕರಣವನ್ನು ವಿಸ್ತೃತ ನ್ಯಾಯಪೀಠಕ್ಕೆ ವರ್ಗಾಯಿಸುವ ತೀರ್ಪಿಗೆ ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ನಾರಿಮನ್ ಮತ್ತು ಡಿ.ವೈ.ಚಂದ್ರಚೂಡ್ ಭಿನ್ನಮತ ದಾಖಲಿಸಿದ್ದರು. ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶದ ಹಕ್ಕು ಬೇಡ ಎಂದು ಅಭಿಪ್ರಾಯಪಟ್ಟಿದ್ದರು.

ನಂತರದ ದಿನಗಳಲ್ಲಿ ಸಲ್ಲಿಕೆಯಾದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ತೆಗೆದುಕೊಂಡಿರಲಿಲ್ಲ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.