ಬೆಂಗಳೂರು:ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ಭಕ್ತರು ತಡೆಯೊಡ್ಡಿದ್ದ ಬೆನ್ನಲ್ಲೇ 1986ರಲ್ಲೇ ಸಿನಿಮಾವೊಂದರಲ್ಲಿನಟಿಯೊಬ್ಬರು ದೇವಾಲಯದ ಆವರಣ ಪ್ರವೇಶಿಸಿ ಹಾಡಿನ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದಿದೆ. ಆದರೆ ಅಯ್ಯಪ್ಪ ಭಕ್ತರು ಮತ್ತು ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ ಒಡ್ಡಿದ ತಡೆಯಿಂದಾಗಿ ಮಹಿಳೆಯರು ದೇವಾಲಯ ಪ್ರವೇಶಿಸುವುದು ಸಾಧ್ಯವಾಗಲಿಲ್ಲ.
ತಮಿಳಿನನಂಬಿನಾರ್ ಕೆಡುವುದಿಲೈ ಸಿನಿಮಾದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯದ ಹದಿನೆಂಟು ಮೆಟ್ಟಿಲಿನ ಸಮೀಪವೇ ನಾಯಕಿ ಹಾಡುವುದನ್ನು ಚಿತ್ರಿಕರಿಸಲಾಗಿದ್ದು,ದೇವಸ್ವಂ ಮಂಡಳಿ 7500 ರೂಪಾಯಿಗಳನ್ನು ಪಡೆದು ಚಿತ್ರಿಕರಣಕ್ಕೆ ಅನುಮತಿ ಕೊಟ್ಟಿತ್ತು.
1986ರಲ್ಲಿನಂಬಿನಾರ್ ಕೆಡುವುದಿಲೈ ಸಿನಿಮಾ ಬಿಡುಗಡೆಯಾಗಿತ್ತು. ಅಯ್ಯಪ್ಪ ಭಕ್ತರಾಗಿರುವ ಎಸ್. ಶಂಕರ್ ಈ ಸಿನಿಮಾದ ನಿರ್ದೇಶಕರು. ಬಹುಪಾಲು ಸಿನಿಮಾ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಚಿತ್ರಿಕರಣಗೊಂಡಿದೆ. ಈ ಸಿನಿಮಾದ ಹಾಡಿನ ಸನ್ನಿವೇಶವೊಂದರಲ್ಲಿ ನಾಯಕಿ ದೇವಾಲಯದಹದಿನೆಂಟು ಮೆಟ್ಟಿಲಿನ ಸಮೀಪವೇ ಹಾಡುವ, ಮೆಟ್ಟಿಲುಗಳನ್ನು ಸ್ಪರ್ಶಿಸುವ ದೃಶ್ಯವನ್ನು ಚಿತ್ರಿಕರಿಸಲಾಗಿದೆ. ಇಲ್ಲಿ ನಟಿಯೊಂದಿಗೆ ಸಹ ಕಲಾವಿದೆಯರು ಕೂಡ ನೃತ್ಯ ಮಾಡುತ್ತಾರೆ.
ದೇವಾಲಯದ ಆವರಣದಲ್ಲಿ ನಟಿಯರ ಪ್ರವೇಶದ ಬಗ್ಗೆ ಆಕ್ಷೇಪ ಎತ್ತಿ ರಾಜೇಂದ್ರನ್ ಎಂಬುವರು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ನಟಿಯರಾದ ಜಯಶ್ರೀ, ಸುಧಾ ಚಂದ್ರನ್, ಬಾಮಾ, ಮನೋರಮಾ, ನಿರ್ದೇಶಕ ಎಸ್.ಶಂಕರ್ ಹಾಗೂ ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್. ಬಾಲಕೃಷ್ಣ ನಾಯರ್ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು.
ಇದನ್ನೂ ಓದಿ:ಮಹಿಳೆಗೆ ಇಲ್ಲ ಮಲೆ ಪ್ರವೇಶ
ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ದೇವಾಲಯ ಪ್ರವೇಶ ತಪ್ಪು ಎಂದು ಹೇಳಿ ನಟಿಯರಿಗೆ ಒಂದು ಸಾವಿರ ರೂಪಾಯಿ ದಂಡ ವಿಧಿಸಿತ್ತು. ಹಾಗೇ ಸಿನಿಮಾ ನಿರ್ದೇಶಕ ಎಸ್, ಶಂಕರ್ ಹಾಗೂ ಚಿತ್ರಿಕರಣಕ್ಕೆ ಅನುಮತಿ ನೀಡಿದ್ದಕ್ಕೆ ದೇವಸ್ವಂ ಮಂಡಳಿಗೂ ದಂಡ ವಿಧಿಸಲಾಗಿತ್ತು.ನಟಿ ಮನೋರಮಾಗೆ 50 ವರ್ಷ ತುಂಬಿದ್ದರಿಂದ ನ್ಯಾಯಾಲಯ ಅವರಿಗೆ ದಂಡ ಹಾಕಿರಲಿಲ್ಲ.
1990ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆಯ ನಂತರ ಕೇರಳ ಹೈಕೋರ್ಟ್ ಮಹಿಳೆಯರಿಗೆ ದೇಗುಲ ಪ್ರವೇಶವಿಲ್ಲ ಎಂದು ತೀರ್ಪು ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.