ತಿರುವನಂತಪುರ: ಶಬರಿಮಲೆ ದೇವಸ್ಥಾನದ ವಿಚಾರವು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಪಕ್ಷದವರಿಗೂ ಪ್ರಚಾರದ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಬಹಿರಂಗ ಪ್ರಚಾರ ಅಂತ್ಯವಾಗುವುದರೊಂದಿಗೆ ಉಳಿದೆಲ್ಲಾ ವಿಚಾರಗಳು ಹಿಂದೆ ಸರಿದರೂ ಶಬರಿಮಲೆಯ ವಿಚಾರ ಮತದಾನದ ದಿನವೂ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೇರಳದ ಪ್ರಭಾವಿ ನಾಯರ್ ಸಮುದಾಯದ ಸಂಘಟನೆಯಾದ ‘ನಾಯರ್ ಸರ್ವಿಸ್ ಸೊಸೈಟಿ’ಯ ಕಾರ್ಯದರ್ಶಿ ಸುಕುಮಾರನ್
ನಾಯರ್ ಅವರ ಹೇಳಿಕೆಯೊಂದಿಗೆ ಮಂಗಳವಾರ ಇಡೀ ಪ್ರಕರಣ ತೆರೆದುಕೊಂಡಿತ್ತು.
‘ರಾಜ್ಯದ ಜನರು ಆಡಳಿತದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಶಬರಿಮಲೆ ದೇವಸ್ಥಾನವನ್ನು ಕುರಿತ ಸರ್ಕಾರದ ತೀರ್ಮಾನಕ್ಕೆ ಅಯ್ಯಪ್ಪ ಭಕ್ತರ ವಿರೋಧವು ಈಗಲೂ ಜೀವಂತವಾಗಿದೆ’ ಎಂದು ಅವರು ಹೇಳಿದ್ದರು.
ಇದಾಗುತ್ತಿದ್ದಂತೆಯೇ ‘ಅಯ್ಯಪ್ಪ ಮತ್ತು ಇತರ ಎಲ್ಲಾ ದೇವರುಗಳೂ ರಾಜ್ಯದಲ್ಲಿ ಜನಪರವಾಗಿ ದುಡಿದ ಎಲ್‌ಡಿಎಫ್ ಸರ್ಕಾರದ
ಜತೆಗಿದ್ದಾರೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಮುಖ್ಯಮಂತ್ರಿಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ
ವಿರೋಧಪಕ್ಷದ ನಾಯಕ ರಮೇಶ್ ಚನ್ನಿತಲ, ‘ಈ ಚುನಾವಣೆಯಲ್ಲಿ ಎಡಪಂಥೀಯ ಸರ್ಕಾರವು ಅಯ್ಯಪ್ಪ ಹಾಗೂ ಅವರ ಭಕ್ತರ ಕೋಪಕ್ಕೆ ಗುರಿಯಾಗುವುದು ಖಚಿತ’ ಎಂದರು. ಜತೆಗೆ, ‘ನಾಸ್ತಿಕರಾಗಿರುವ ವಿಜಯನ್ ಅವರು ಚುನಾವಣೆಯ ಗೆಲುವಿಗೆ ಅಯ್ಯಪ್ಪನ ಆಶೀರ್ವಾದ ಕೇಳುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದರು.
ವಿಜಯನ್ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್, ‘ಮೂರು ವರ್ಷಗಳ ಹಿಂದೆ ಶಬರಿಮಲೆಯಲ್ಲಿ ಮುಖ್ಯಮಂತ್ರಿಯವರು ರಾಕ್ಷಸೀ ಪ್ರವೃತ್ತಿ ತೋರಿಸಿದ್ದರು. ಇಂಥ ದುಷ್ಕೃತ್ಯಗಳನ್ನು ರಾಜ್ಯದ ಜನರು ಎಂದಿಗೂ ಮರೆಯಲಾರರು’ ಎಂದರು.
ಕಾಂಗ್ರೆಸ್ ಮುಖಂಡರಾದ ಎ.ಕೆ. ಆ್ಯಂಟನಿ, ಉಮ್ಮನ್ ಚಾಂಡಿ, ವಿವಿಧ ಸಮುದಾಯಗಳ ನಾಯಕರು, ಜನಸಾಮಾನ್ಯರು ಸಹ
ಮುಖ್ಯಮಂತ್ರಿಯ ಹೇಳಿಕೆಗೆ ಪರ–ವಿರೋಧಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಇಡೀ ದಿನ ಈ ವಿಚಾರ ಚರ್ಚೆಯಲ್ಲಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.