ನವದೆಹಲಿ: ಶಬರಿಮಲೆ ದೇಗುಲ ವಿವಾದಕ್ಕೆ ಸಂಬಂಧಿಸಿದಂತೆಪಿಣರಾಯಿ ವಿಜಯನ್ನೇತೃತ್ವದ ಕೇರಳ ಸರ್ಕಾರ ಅಯ್ಯಪ್ಪನ ಭಕ್ತರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಸರ್ಕಾರ ಭಕ್ತರನ್ನು ಬಂಧಿತ ಅಪರಾಧಿಗಳಂತೆ (ಗುಲಾಗ್ ಇನ್‌ಮೇಟ್ಸ್) ಕಾಣುತ್ತಿದ್ದು, ಯಾವುದೇ ಮೂಲಸೌಕರ್ಯಗಳನ್ನು ನೀಡದೆ ಕೀಳು ಮಟ್ಟದಲ್ಲಿ ನಡೆಸಿಕೊಳ್ಳುತ್ತಿದೆ ಎಂದು ಹೇಳಿದರು.
ಬಿಜೆಪಿಯು ಪ್ರತಿಯೊಬ್ಬ ಅಯ್ಯಪ್ಪ ಭಕ್ತರಿಗೆ ಬೆಂಬಲವಾಗಿ ನಿಲ್ಲುತ್ತದೆ. ಜನರ ನಂಬಿಕೆಗಳನ್ನು ಛಿದ್ರ ಮಾಡಲು ಬಿಡುವುದಿಲ್ಲ ಎಂಬ ಭರವಸೆ ನೀಡಿದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅಮಿತ್ ಶಾ, ಅಯ್ಯಪ್ಪ ದೇಗುಲದೊಳಗೆ ಮಹಿಳೆಯರ ಪ್ರವೇಶ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ಬೆಂಬಲವಾಗಿ ನಿಲ್ಲುತ್ತದೆ ಎಂದರು.
ಈ ಸೂಕ್ಷ್ಮ ವಿಚಾರವನ್ನು ಕೇರಳ ಸರ್ಕಾರ ನಡೆಸಿಕೊಳ್ಳುತ್ತಿರುವ ಬಗ್ಗೆ ಬೇಸರವಾಗುತ್ತಿದೆ. ಕೇರಳ ಪೊಲೀಸರು ಯುವತಿಯರು, ಮಹಿಳೆಯರ ಜೊತೆ ಅಮಾನವೀಯವಾಗಿ ನಡೆದುಕೊಂಡಿದೆ. ಅಲ್ಲದೇ ಯಾತ್ರಿಕರಿಗೆ ಮೂಲಸೌಕರ್ಯಗಳನ್ನು ನೀಡದೆ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರನ್ನು ಬಂಧಿಸುವ ಮೂಲಕ ಶಬರಿಮಲೆ ಹೋರಾಟವನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದಲ್ಲಿ ಅದು ಅವರ ತಪ್ಪು ತಿಳುವಳಿಕೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.