ಶಬರಿಮಲೆ:ಎರಡು ತಿಂಗಳ ಅವಧಿಯ ಶಬರಿಮಲೆ ತೀರ್ಥಯಾತ್ರೆ ಋತು ಶನಿವಾರದಿಂದ ಆರಂಭವಾಗಿದ್ದು, ಸಂಜೆ ಐದು ಗಂಟೆಗೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.
ಈ ಬಾರಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ದೊರೆಯಲಿಲ್ಲ. ಆಂಧ್ರಪ್ರದೇಶದ ವಿಜಯವಾಡದಿಂದ ಶನಿವಾರ ಬಂದಿದ್ದ 40 ಮಂದಿ ಭಕ್ತರ ತಂಡದಲ್ಲಿದ್ದ್ ಕೆಲವು ಮಹಿಳೆಯರನ್ನು ಶನಿವಾರ ವಾಪಸ್ ಕಳುಹಿಸಲಾಗಿದೆ. ಪಂಪಾನದಿಯ ಸಮೀಪ ಇವರನ್ನು ಮಹಿಳಾ ಪೊಲೀಸರು ತಡೆದು ತಪಾಸಣಾ ಕೊಠಡಿಗೆ ಕರೆದೊಯ್ದು ವಯಸ್ಸಿನ ಪ್ರಮಾಣಪತ್ರ ತೋರಿಸುವಂತೆ ಸೂಚಿಸಿದರು. ಅವರಲ್ಲಿ ಮೂವರು ಮಹಿಳೆಯರು 10ರಿಂದ 50 ವರ್ಷದೊಳಗಿನವರು ಎಂದು ಪತ್ತೆಯಾಗಿದೆ. ಆ ಮಹಿಳೆಯರಿಗೆ ಮುಂದೆ ಪ್ರಯಾಣ ಬೆಳೆಸಲು ಅವಕಾಶ ನಿರಾಕರಿಸಿದ ಪೊಲೀಸರು, ವಾಪಸ್ ಹೋಗುವಂತೆ ಸೂಚಿಸಿದರು. ಪೊಲೀಸರ ಕ್ರಮಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸದೆ ಅವರು ವಾಪಸಾಗಿದ್ದಾರೆ.
‘ಇಲ್ಲಿಗೆ ಬರುವ ಭಕ್ತಿಗೆ ಶಬರಿಮಲೆಯ ಸಂಪ್ರದಾಯ ಮತ್ತು ನಂಬಿಕೆಗಳ ಬಗ್ಗೆ ತಿಳಿವಳಿಕೆ ನೀಡಿಲಾಗುತ್ತಿದೆ. ಇಲ್ಲಿಗೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶ ಇರುವುದಿಲ್ಲ ಎಂಬುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ಯಾತ್ರೆ ಆರಂಭದ ಹಿನ್ನೆಲೆಯಲ್ಲಿ ಪಂಪಾ, ಶಬರಿಗಿರಿ ಮತ್ತು ಶಬರಿಮಲೆ ದೇಗುಲದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಎಲ್ಲಾ ವಯೋಮಾನದ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವುದಕ್ಕೆ ಸಂಬಂಧಿಸಿದ ತೀರ್ಪಿನ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ 2018ರ ತೀರ್ಪಿಗೆ ನಿಷೇದಾಜ್ಞೆಯನ್ನು ನೀಡಿಲ್ಲ. ಆದರೂ ಅಂತಿಮ ತೀರ್ಪು ಬರುವವರೆಗೆ 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಪ್ರವೇಶ ನೀಡದಿರಲು ಕೇರಳ ಸರ್ಕಾರ ತೀರ್ಮಾನಿಸಿದೆ.
ಕಳೆದ ವರ್ಷ ದೇವಸ್ಥಾನವನ್ನು ಪ್ರವೇಶಿಸಲು ಬಂದಿದ್ದ ಮಹಿಳೆಯರಿಗೆ ಸರ್ಕಾರವೇ ಪೊಲೀಸ್ ಭದ್ರತೆಯನ್ನು ನೀಡಿತ್ತು. ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಬಾರಿ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿರುವ ಸರ್ಕಾರ, ‘ದೇವಸ್ಥಾನದೊಳಗೆ ಪ್ರವೇಶಿಲು ಬರುವ ಮಹಿಳಾ ಚಳವಳಿಗಾರರಿಗೆ ಪೊಲೀಸ್ ರಕ್ಷಣೆ ಒದಗಿಸಲಾಗದು. ತಾವು ದೇವಸ್ಥಾನದೊಳಗೆ ಪ್ರವೇಶಿಸುತ್ತಿದ್ದೇವೆ ಎಂದು ಘೋಷಿಸಲು ಕೆಲವರು ಮಾಧ್ಯಮಗೋಷ್ಠಿ ಆಯೋಜಿಸುತ್ತಿದ್ದಾರೆ. ಇದರ ಹಿಂದೆ ಇರುವುದು ಪ್ರಚಾರ ಪಡೆಯುವ ಉದ್ದೇಶ ಮಾತ್ರ. ಇಂಥವರಿಗೆ ಬೆಂಬಲ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು.
‘ದೇವಸ್ಥಾನದೊಳಗೆ ಪ್ರವೇಶಿಸಲೇಬೇಕು ಎನ್ನುವ ಮಹಿಳೆಯರು ನ್ಯಾಯಾಲಯದಿಂದ ಆದೇಶ ಪಡೆದುಕೊಳ್ಳಬೇಕು’ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್ ಶುಕ್ರವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.