ನವದೆಹಲಿ: ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ಅವಕಾಶ ಕೊಟ್ಟ ಸುಪ್ರೀಂ ಕೋರ್ಟ್ ತೀರ್ಪು ವಿರುದ್ಧ ಕೇರಳದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿರುವುದರಿಂದ ದಕ್ಷಿಣದ ಇತರ ರಾಜ್ಯಗಳಲ್ಲಿಯೂ ಭದ್ರತೆ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮತ್ತು ಸಾಮಾಜಿಕ ಜಾಲತಾಣಗಳು ಹಾಗೂ ಇತರ ಅಂತರ್ಜಾಲ ಸೇವೆಗಳ ಮೂಲಕ ಪ್ರತಿಕೂಲ ಸಂದೇಶಗಳು ಹರಡುವುದರ ಬಗ್ಗೆ ನಿಗಾ ಇರಿಸುವಂತೆ ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ.
ಇದನ್ನೂ ಓದಿ:ನಾರಿ ಪ್ರವೇಶ: ಸೃಷ್ಟಿಯಾಗದ ಇತಿಹಾಸ
‘ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ಬೇಕಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳನ್ನು ತಡೆಯುವುದಕ್ಕೆ ಬೇಕಾದ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಕೇಂದ್ರ ಹೇಳಿದೆ.
ಮಹಿಳೆಯರ ದೇವಸ್ಥಾನ ಪ್ರವೇಶದ ಪರವಾಗಿ ನಾಗರಿಕ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತರು, ಎಡ ಪಕ್ಷಗಳು, ಎಡಪಂಥೀಯ ಒಲವಿನ ಉಗ್ರವಾದಿ ಗುಂಪುಗಳು ಕೆಲಸ ಮಾಡುತ್ತಿವೆ ಎಂಬುದನ್ನು ಕೇಂದ್ರದ ನಿರ್ದೇಶನದಲ್ಲಿ ಉಲ್ಲೇಖಿಸಲಾಗಿದೆ.
ಕೇರಳದ ನೆರೆಯ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿಯೂ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂಬುದನ್ನು ಕೇಂದ್ರವು ನೀಡಿದ ಸೂಚನೆಯಲ್ಲಿ ತಿಳಿಸಲಾಗಿದೆ.
ಟಿಡಿಬಿಯಿಂದ ಸುಪ್ರೀಂ ಕೋರ್ಟ್‌ಗೆ ವರದಿ
ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿ ಮಾಡಲು ರಾಜ್ಯ ಸರ್ಕಾರ ಯತ್ನಿಸಿದಾಗ ಉಂಟಾದ ಪರಿಸ್ಥಿತಿಯ ಬಗ್ಗೆ ವಿವರವಾದ ವರದಿ ತಯಾರಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವುದು. ಬಿಕ್ಕಟ್ಟು ಶಮನಕ್ಕೆ ದಾರಿ ತೋರಿಸುವಂತೆ ಕೋರಲಾಗುವುದು ಎಂದು ಶಬರಿಮಲೆ ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷ ಪದ್ಮಕುಮಾರ್ ತಿಳಿಸಿದ್ದಾರೆ. ಈಗ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕಾಗಿ ಇದೇ ರೀತಿಯ ವರದಿಯನ್ನು ಕೇರಳ ಹೈಕೋರ್ಟ್‌ಗೆ ಕೂಡ ಸಲ್ಲಿಸಲಾಗುವುದು. ಈ ವಿಚಾರದಲ್ಲಿ ಟಿಡಿಬಿ ಯಾವುದೇ ರಾಜಕೀಯ ಮಾಡುವುದಿಲ್ಲ, ಬಿಕ್ಕಟ್ಟು ಪರಿಹಾರವೇ ಟಿಡಿಬಿಯ ಉದ್ದೇಶ ಎಂದು ಅವರು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವ ಅರ್ಜಿ ಸಲ್ಲಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಪದ್ಮಕುಮಾರ್, ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಎಲ್ಲ ಅರ್ಜಿಗಳಲ್ಲಿ ಟಿಡಿಬಿಯೇ ಪ್ರತಿವಾದಿ ಎಂದರು.
ಭಕ್ತರ ಮೇಲೆ ಬಲಪ್ರಯೋಗ ಇಲ್ಲ
ಪ್ರತಿಭಟನೆ ನಡೆಸುತ್ತಿರುವ ಅಯ್ಯಪ್ಪ ಭಕ್ತರನ್ನು ಬಲಪ್ರಯೋಗಿಸಿ ತೆರವು ಮಾಡಲು ಸರ್ಕಾರ ಸಿದ್ಧವಿಲ್ಲ ಎಂದು ಕೇರಳದ ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.
ಶಬರಿಮಲೆಯ ತುದಿಯವರೆಗೆ ಹೋದ ಒಬ್ಬ ಮಹಿಳೆ ಸಾಮಾಜಿಕ ಕಾರ್ಯಕರ್ತೆ ಎಂದು ಗೊತ್ತಾಗಿದೆ. ಶಬರಿಮಲೆಯು ಹೋರಾಟ ಅಥವಾ ಶಕ್ತಿ ಪ್ರದರ್ಶನದ ಸ್ಥಳ ಅಲ್ಲ. ಶಬರಿಮಲೆಗೆ ಹೋಗುವ ಮಹಿಳೆಯರ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಬೇಕು ಎಂದು ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪನ್ನು ಜಾರಿಗೆ ತರುವ ಜವಾಬ್ದಾರಿ ರಾಜ್ಯ ಸರ್ಕಾರಕ್ಕೆ ಇದೆ. ಭಕ್ತರಿಗೆ ರಕ್ಷಣೆ ಕೊಡಲು ಸರ್ಕಾರ ಸನ್ನದ್ಧವಾಗಿದೆಯೇ ಹೊರತು ಹೋರಾಟಗಾರರಿಗೆ ಅಲ್ಲ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಮಹಿಳೆಯರಿಬ್ಬರು ಹಿಂದಿರುಗಿದ್ದು ಯಾಕೆ?
* ಬಲಪ್ರಯೋಗದ ಮೂಲಕ ಭಕ್ತರನ್ನು ತೆರವು ಮಾಡಿ ಮಹಿಳೆಯರನ್ನು ದೇವಾಲಯದೊಳಕ್ಕೆ ಕರೆದೊಯ್ಯುವುದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ
* ಮಹಿಳೆಯರು ದೇವಸ್ಥಾನದೊಳಕ್ಕೆ ಹೊಕ್ಕರೆ ದೇವಾಲಯದ ಬಾಗಿಲು ಮುಚ್ಚುವುದಾಗಿ ದೃಢವಾಗಿ ಹೇಳಿದತಂತ್ರಿ (ಪ್ರಧಾನ ಅರ್ಚಕ)
* ಹಿಂದಕ್ಕೆ ಹೋಗುವಂತೆ ತಂತ್ರಿಯಿಂದ ಮಹಿಳೆಯರ ಮನವೊಲಿಕೆ
* ಪರಿಸ್ಥಿತಿ ಬಹಳ ಬಿಗುವಿನಿಂದ ಕೂಡಿದೆ ಎಂಬ ವಿಚಾರವನ್ನು ಮಹಿಳೆಯರಿಗೆ ಮನದಟ್ಟು ಮಾಡಿದಪೊಲೀಸರು
ಇವುಗಳನ್ನೂಓದಿ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.