ಶಬರಿಮಲೆ:‘ಶಬರಿಮಲೆ ದೇವಾಲಯ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಬೇಕು ಎಂಬ ತೀರ್ಪನ್ನು ಅನುಷ್ಠಾನಕ್ಕೆ ತರಲು ಮತ್ತಷ್ಟು ಕಾಲಾವಕಾಶ ಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ.
10ರಿಂದ 50 ವರ್ಷದವರೆಗಿನ ಮಹಿಳೆಯರ ಪ್ರವೇಶಕ್ಕೆ ಶಬರಿಮಲೆ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಅವಕಾಶ ಇಲ್ಲ. ಆದರೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಈಚೆಗೆ ತೀರ್ಪು ನೀಡಿತ್ತು.
ಈ ತೀರ್ಪಿನ ವಿರುದ್ಧ ತೀವ್ರ ಪ್ರತಿಭಟನೆ ನಡೆದಿತ್ತು. ಅಲ್ಲದೆ ದೇವಾಲಯ ಪ್ರವೇಶಿಸುವ ಮಹಿಳೆಯರ ಪ್ರಯತ್ನ ವಿಫಲವಾಗಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಅನುಷ್ಠಾನಕ್ಕೆ ತರದೆ ಬೇರೆ ಆಯ್ಕೆಯೇ ಇಲ್ಲ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ಮಂಡಳಿ ನಿರ್ಧರಿಸಿದೆ.
62 ದಿನಗಳ ವಾರ್ಷಿಕ ವ್ರತಾಚರಣೆಗಾಗಿ ಶಬರಿಮಲೆ ದೇವಾಲಯದ ಬಾಗಿಲನ್ನು ಶುಕ್ರವಾರ ಸಂಜೆ ತೆರೆಯಲಾಯಿತು. ಅದರ ಬೆನ್ನಲ್ಲೇ ಟಿಡಿಬಿಯು ಪತ್ರಿಕಾಗೋಷ್ಠಿ ನಡೆಸಿತು.
‘ಸೋಮವಾರವೇ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸುತ್ತೇವೆ. ಮಹಿಳೆಯರ ಪ್ರವೇಶಕ್ಕೆ ಅವಕಾಶ ಮಾಡಿಕೊಡುವ ಮುನ್ನ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಾಗುತ್ತದೆ. ಇದಕ್ಕಾಗಿ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಬೇಕು. ಹೀಗಾಗಿ ತೀರ್ಪು ಜಾರಿಗೆ ತರಲು ಮತ್ತಷ್ಟು ಕಾಲಾವಕಾಶ ಕೇಳಲಿದ್ದೇವೆ’ ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.