ಶಬರಿಮಲೆ: ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ಶುಕ್ರವಾರ ತೆರೆದಿದ್ದು, ಅಪಾರ ಸಂಖ್ಯೆಯ ಭಕ್ತ ಸಾಗರವೇ ದೇಗಲುದತ್ತ ಹರಿದುಬಂದಿದೆ.
ಶುಕ್ರವಾರ ನಸುಕಿನ 3ಕ್ಕೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಯಿತು. ದೇವಾಲಯದ ಮುಖ್ಯ ಅರ್ಚಕ ತಂತ್ರಿ ಮಹೇಶ್ ಮೊಹನಾರು ಅವರು ಗರ್ಭಗುಡಿಯ ಬಾಗಿಲುಗಳನ್ನು ತೆರೆದರು. ಪರ್ವತ ಶ್ರೇಣಿಯಲ್ಲಿರುವ ದೇಗುಲದ ಬಾಗಿಲು ಎರಡು ತಿಂಗಳ ಅವಧಿಗೆ ತೆರೆದಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಂದ ಭಕ್ತರು ತಂಡೋಪತಂಡವಾಗಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ.
ದೇವಾಲಯದ ಬಾಗಿಲು ತೆರೆಯುವ ಸಂದರ್ಭದಲ್ಲಿ ಕೇರಳದ ದೇವಸಂ ಸಚಿವ ಕೆ.ರಾಧಾಕೃಷ್ಣನ್, ಶಾಸಕರಾದ ಪ್ರಮೋದ್ ನಾರಾಯಣ್ ಹಾಗೂ ಕೆ.ಯು.ಜಿನೀಶ್ ಕುಮಾರ್ ಇದ್ದರು. ತಿರುವಾಂಕೂರು ದೇವಸ್ಥಾನಂ ಮಂಡಳಿಗೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಎಸ್.ಪ್ರಶಾಂತ್ ಅವರು ಹಾಜರಿದ್ದು, ವಿಶೇಷ ಪೂಜೆ ಸಲ್ಲಿಸಿದರು.
ಸನ್ನಿಧಾನದಲ್ಲಿದ್ದ ಅನ್ನದಾನ ಮಂಟಪಮ್‌ನಲ್ಲಿ ಆಯೋಜಿಸಿರುವ ಉಚಿತ ಪ್ರಸಾದ ವಿತರಣೆಗೆ ಸಚಿವ ರಾಧಾಕೃಷ್ಣನ್ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ಅವರು ನಡೆಸಿದರು. ದೇವಾಲಯದ ಆವರಣದಲ್ಲಿ ಮೂಲಸೌಕರ್ಯ ಒದಗಿಸಲು ಕಾಲಮಿತಿಯೊಳಗೆ ಎಲ್ಲಾ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.