ADVERTISEMENT

ಶಬರಿಮಲೆ ಪ್ರಸಾದದಲ್ಲಿ ಕೀಟನಾಶಕ: ಗೊಬ್ಬರವಾಗಲಿದೆ ₹5.5 ಕೋಟಿಯ ‘ಅರವಣ ಪಾಯಸ’

ಅರ್ಜುನ್ ರಘುನಾಥ್
Published 6 ಅಕ್ಟೋಬರ್ 2024, 13:59 IST
Last Updated 6 ಅಕ್ಟೋಬರ್ 2024, 13:59 IST
<div class="paragraphs"><p>ಶಬರಿಮಲೆ ದೇಗುಲ</p></div>

ಶಬರಿಮಲೆ ದೇಗುಲ

   

–ಪಿಟಿಐ ಚಿತ್ರ

ತಿರುವನಂತಪುರ: ದಕ್ಷಿಣ ಭಾರತದ ಖ್ಯಾತ ದೇವಸ್ಥಾನಗಳಲ್ಲಿ ಒಂದಾಗಿರುವ ಶಬರಿಮಲೆಯ ಅಯ್ಯಪ್ಪ ದೇವಸ್ಥಾನದ ಪ್ರಸಾದ ‘ಅರವಣ’ವನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲು ದೇವಸ್ಥಾನದ ಆಡಳಿತದ ಹೊಣೆ ಹೊತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮುಂದಾಗಿದೆ.

ADVERTISEMENT

ಈ ಪ್ರಸಾದದಲ್ಲಿ ಬಳಸಿದ ಏಲಕ್ಕಿಯಲ್ಲಿ ಕೀಟನಾಶಕದ ಪ್ರಮಾಣವು ಅನುಮತಿಗಿಂತ ಹೆಚ್ಚಿತ್ತು ಎಂಬ ದೂರು ಕಳೆದ ವರ್ಷ ದಾಖಲಾದ ಕಾರಣಕ್ಕೆ, 6.65 ಲಕ್ಷ ಕಂಟೇನರ್‌ಗಳಲ್ಲಿ ಇರುವ ಅರವಣ ಪ್ರಸಾದವನ್ನು ಶಬರಿಮಲೆ ದೇವಸ್ಥಾನದಲ್ಲಿ ಒಂದು ವರ್ಷದಿಂದ ಬಳಸದೆ ಹಾಗೇ ಇರಿಸಲಾಗಿದೆ.

ಅರವಣ ಬಳಕೆಗೆ ಯೋಗ್ಯವಾಗಿದೆ ಎಂಬುದು ನಂತರದ ದಿನಗಳಲ್ಲಿ ಖಚಿತವಾದರೂ ₹5.5 ಕೋಟಿ ಮೌಲ್ಯದ ಪ್ರಸಾದವನ್ನು ಬಳಸದೆ ಇರಲು ಟಿಡಿಬಿ ತೀರ್ಮಾನಿಸಿತ್ತು. ಆದರೆ ಈ ಪ್ರಸಾದವನ್ನು ವಿಲೇವಾರಿ ಮಾಡುವುದು ಮಂಡಳಿಗೆ ಸವಾಲಾಗಿತ್ತು. ಅದನ್ನು ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡುವ ಪ್ರಸ್ತಾವ ಇತ್ತಾದರೂ ಅದಕ್ಕೆ ಅರಣ್ಯ ಅಧಿಕಾರಿಗಳಿಂದ ವಿರೋಧ ವ್ಯಕ್ತವಾಯಿತು.

ಬೇರೆ ಬೇರೆ ಆಯ್ಕೆಗಳನ್ನು ಪರಿಶೀಲಿಸಲಾಗಿತ್ತಾದರೂ ಭಕ್ತರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಪ್ರಸಾದವನ್ನು ವಿಲೇವಾರಿ ಮಾಡಬೇಕು ಎಂಬುದು ಮಂಡಳಿಯ ಬಯಕೆ ಆಗಿತ್ತು. ಹೀಗಾಗಿ, ‘ಅರವಣ’ವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿತ್ತು.

ಕೇರಳದ ‘ಇಂಡಿಯನ್ ಸೆಂಟ್ರಿಫ್ಯೂಗ್ ಎಂಜಿನಿಯರಿಂಗ್ ಸಲ್ಯೂಷನ್ಸ್’ (ಐಸಿಇಎಸ್) ಹೆಸರಿನ ಕಂಪನಿಯು ಟೆಂಡರ್ ಪಡೆದುಕೊಂಡಿದೆ ಎಂದು ಮಂಡಳಿಯ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಅರವಣ’ವನ್ನು ಹೈದರಾಬಾದ್‌ನಲ್ಲಿ ಇರುವ ತನ್ನ ಘಟಕಕ್ಕೆ ಒಯ್ದು, ಅದನ್ನು ವೈಜ್ಞಾನಿಕವಾಗಿ ಗೊಬ್ಬರವನ್ನಾಗಿ ಪರಿವರ್ತಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ಅಕ್ಕಿ ಮತ್ತು ಬೆಲ್ಲವನ್ನು ಬಳಸಿ ‘ಅರವಣ’ ಸಿದ್ಧಪಡಿಸಲಾಗುತ್ತದೆ. ಇದು ಶಬರಿಮಲೆ ದೇವಸ್ಥಾನಕ್ಕೆ ಆದಾಯದ ಒಂದು ಪ್ರಮುಖ ಮೂಲ ಕೂಡ ಹೌದು. ಕಳೆದ ವರ್ಷದ ಯಾತ್ರೆಯ ಸಂದರ್ಭದಲ್ಲಿ ಈ ಪ್ರಸಾದ ಮಾರಾಟದಿಂದ ₹147 ಕೋಟಿ ವರಮಾನ ಬಂದಿತ್ತು. ಇದು ದೇವಸ್ಥಾನದ ಒಟ್ಟು ವರಮಾನದ ಶೇಕಡ 40ರಷ್ಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.