ಪತ್ತನಂತಿಟ್ಟ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಪ್ರಕರಣದಲ್ಲಿ ಅಯ್ಯಪ್ಪ ಧರ್ಮ ಸೇನಾ ಅಧ್ಯಕ್ಷ, ಸಾಮಾಜಿಕ ಕಾರ್ಯಕರ್ತ ರಾಹುಲ್ ಈಶ್ವರ್ ಅವರನ್ನು ಬಂಧಿಸಲಾಗಿದೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದರೆ ಕೈಗೆ ಗಾಯ ಮಾಡಿ ರಕ್ತದ ಹನಿ ಬೀಳುವಂತೆ ಮಾಡಿ ಶಬರಿಮಲೆ ಬಾಗಿಲು ಮುಚ್ಚುವಂತೆ ಮಾಡಬೇಕೆಂದು ರಾಹುಲ್ ಈಶ್ವರ್ ಪ್ರತಿಭಟನಾಕಾರರಿಗೆ ಆಹ್ವಾನ ನೀಡಿದ್ದರು ಎಂಬ ಆರೋಪದಲ್ಲಿ ಬಂಧನ ನಡೆದಿದೆ.
ಕೊಚ್ಚಿ ನಿವಾಸಿ ಪ್ರಮೋದ್ ಅವರು ನೀಡಿದ ದೂರಿನ ಮೇಲೆ ಈ ಬಂಧನ ನಡೆದಿದೆ. ಎರ್ನಾಕುಳಂನಲ್ಲಿ ಪತ್ರಿಕಾಗೋಷ್ಠಿ ನಡೆಸಿದಾಗ ರಾಹುಲ್ ಈ ರೀತಿಯ ಪ್ರತಿಭಟನೆಗೆ ಆಹ್ವಾನ ನೀಡಿದ್ದರು.ಈ ಹೇಳಿಕೆ ವಿವಾದವಾದಾಗ ತಾನು ಆ ರೀತಿ ಹೇಳಿಲ್ಲ ಎಂದಿದ್ದರು ರಾಹುಲ್. 152ಎ ಸೆಕ್ಷನ್ ಅಡಿಯಲ್ಲಿ ರಾಹುಲ್ ವಿರುದ್ಧ ಆರೋಪ ದಾಖಲಿಸಲಾಗಿದೆ.
ಪ್ರತಿಭಟನೆ: 3,345 ಮಂದಿ ಬಂಧನ
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಭಾನುವಾರದ ವರೆಗೆ 3,345 ಮಂದಿಯನ್ನು ಬಂಧಿಸಲಾಗಿದೆ.ಕೇರಳದಾದ್ಯಂತ 517 ಪ್ರಕರಣಗಳು ದಾಖಲಾಗಿವೆ.
ಭಾನುವಾರ ಬೆಳಗ್ಗೆ ರಾಹುಲ್ ಈಶ್ವರ್ ಅವರನ್ನು ಬಂಧಿಸುವ ಮೂಲಕ ಅಕ್ಟೋಬರ್ 26ರ ವರೆಗೆ 3,346 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯಲ್ಲಿ ಕಳೆದ 12 ಗಂಟೆಗಳಲ್ಲಿ 500ಕ್ಕಿಂತಲೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ.ತಿರುವನಂತಪುಪರಂ, ಕೋಯಿಕ್ಕೋಡ್ ಮತ್ತು ಎರ್ನಾಕುಳಂ ಜಿಲ್ಲೆಯಲ್ಲಿಯೂ ಇದೇ ರೀತಿ ಬಂಧನ ನಡೆದಿದೆ.
ಇಲ್ಲಿಯವರೆಗೆ 122 ಮಂದಿ ಪೊಲೀಸರ ವಶದಲ್ಲಿದ್ದು, ಉಳಿದವರನ್ನು ಜಾಮೀನು ಮೂಲಕ ಬಂಧಮುಕ್ತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.