ADVERTISEMENT

ಶಬರಿಮಲೆ ರೋಪ್‌ವೇಗೆ ಶೀಘ್ರ ಚಾಲನೆ: ಮುಜರಾಯಿ ಸಚಿವ ವಿ.ಎನ್‌. ವಾಸವನ್‌

ಮುಂದಿನ ವರ್ಷದೊಳಗೆ ಕಾರ್ಯರೂಪಕ್ಕೆ ಬರುವ ನೀರಿಕ್ಷೆ * ₹250 ಕೋಟಿ ವೆಚ್ಚದ ಯೋಜನೆ

ಪಿಟಿಐ
Published 15 ನವೆಂಬರ್ 2024, 15:59 IST
Last Updated 15 ನವೆಂಬರ್ 2024, 15:59 IST
ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು 18 ಮೆಟ್ಟಿಲುಗಳನ್ನು ಏರುವುದಕ್ಕಾಗಿ ಶುಕ್ರವಾರ ಕಾಯುತ್ತಿದ್ದ ಭಕ್ತರು –ಪಿಟಿಐ ಚಿತ್ರ  
ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು 18 ಮೆಟ್ಟಿಲುಗಳನ್ನು ಏರುವುದಕ್ಕಾಗಿ ಶುಕ್ರವಾರ ಕಾಯುತ್ತಿದ್ದ ಭಕ್ತರು –ಪಿಟಿಐ ಚಿತ್ರ     

ಪತ್ತನಂತಿಟ್ಟ (ಕೇರಳ): ಇಲ್ಲಿನ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮುಂದಿನ ಮಂಡಲ– ಮಕರವಿಳಕ್ಕು ಯಾತ್ರೆಯ ಋತು ವೇಳೆಗೆ ಬಹುನಿರೀಕ್ಷಿತ ರೋಪ್‌ವೇ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ಇದರಿಂದ ದೇಗುಲಕ್ಕೆ ವಯಸ್ಸಾದ ಭಕ್ತರ ಪ್ರಯಾಣ ಮತ್ತು ಸರಕು ಸಾಗಣೆ ಸುಲಭವಾಗಲಿದೆ ಎಂದು ಕೇರಳ ಮುಜರಾಯಿ ಸಚಿವ ವಿ.ಎನ್‌. ವಾಸವನ್‌ ಶುಕ್ರವಾರ ತಿಳಿಸಿದರು.  

ಪೆರಿಯಾರ್‌ ಹುಲಿ ಸಂರಕ್ಷಿತ ಪ್ರದೇಶದೊಳಗೆ ಡೀಸೆಲ್‌ ಟ್ರ್ಯಾಕ್ಟರ್‌ಗಳಿಂದ ಉಂಟಾಗುವ ಮಾಲಿನ್ಯವು, ರೂಪ್‌ವೇ ಬರುವುದರಿಂದ ಅಂತ್ಯವಾಗಲಿದೆ ಎಂದು ಅವರು ಹೇಳಿದರು.

ಭೂಮಿ ಹಸ್ತಾಂತರಿಸುವ ಕುರಿತು ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವಿನ ಸಮಸ್ಯೆಗಳಿಂದಾಗಿ ರೂಪ್‌ವೇ ಯೋಜನೆಗೆ ಚಾಲನೆ ದೊರೆತಿರಲಿಲ್ಲ. ಆದರೆ ಈಗ ಸಮಸ್ಯೆಗಳು ಇತ್ಯರ್ಥವಾಗಿದ್ದು, ಶೀರ್ಘದಲ್ಲಿಯೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.

ADVERTISEMENT

ಈ ವರ್ಷದ ತೀರ್ಥಯಾತ್ರೆಯ ಋತುವಿನ ಆರಂಭಕ್ಕೆ ನಡೆದ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಈ ಕುರಿತು ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದರು. 

ಅರಣ್ಯ ಇಲಾಖೆಗೆ ಬೇರೆಡೆ ಭೂಮಿ:

ರೋಪ್‌ವೇ ನಿರ್ಮಾಣದ ಗುತ್ತಿಗೆಯನ್ನು ಈಗಾಗಲೇ ಖಾಸಗಿ ಕಂಪನಿಗೆ ನೀಡಲಾಗಿದೆ. ಆದರೆ ಭೂಮಿ ನೀಡುವ ಪ್ರಕ್ರಿಯೆಯ ವಿಳಂಬದಿಂದ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿರಲಿಲ್ಲ. ಇದೀಗ ಕಂದಾಯ ಇಲಾಖೆಯು ಅಷ್ಟೇ ಪ್ರಮಾಣದ ಭೂಮಿಯನ್ನು ಕೊಲ್ಲಂನಲ್ಲಿ ಅರಣ್ಯ ಇಲಾಖೆಗೆ ಒದಗಿಸಲು ಒಪ್ಪಿಗೆ ಸೂಚಿಸಿದೆ. ಕಂದಾಯ, ಅರಣ್ಯ ಮತ್ತು ಮುಜರಾಯಿ ಸಚಿವರ ಜಂಟಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.  

‘ಯೋಜನೆಗೆ ಭೂಮಿಯನ್ನು ಇಂದು ಹಸ್ತಾಂತರಿಸಬೇಕಿತ್ತು. ಆದರೆ ಇಂದು ದೇಗುಲ ತೆರೆಯುವುದರಿಂದಾಗಿ, ನಾವು ಭೂಮಿ ಹಸ್ತಾಂತರಿಸುವ ದಿನವನ್ನು ಇದೇ 21ಕ್ಕೆ ನಿಗದಿ ಮಾಡಿದ್ದೇವೆ’ ಎಂದು ವಾಸನ್‌ ತಿಳಿಸಿದರು.  

ಬೆಟ್ಟದ ಮೇಲಿನ ದೇಗುಲಕ್ಕೆ ಸರಕು, ಸಾಮಗ್ರಿಗಳನ್ನು ಸಾಗಿಸಲು ಡೀಸೆಲ್‌ ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ. ಇದರಿಂದ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಮಾಲಿನ್ಯವಾಗುತ್ತಿದೆ. ಅಲ್ಲದೆ ವಯಸ್ಸಾದ ಮತ್ತು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಭಕ್ತರು ಪಂಪಾದಿಂದ ದೇಗುಲಕ್ಕೆ ತಲುಪಲು ‘ಡೋಲಿ’ಗಳನ್ನು ಅವಲಂಬಿಸಿದ್ದಾರೆ. ರೂಪ್‌ವೇ ಬಂದ ಬಳಿಕ ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಅಲ್ಲದೆ ಆಂಬುಲೆನ್ಸ್‌ ಸೇವೆಗಳಿಗೆ ಮತ್ತು ರೋಗಿಗಳಿಗೆ ತ್ವರಿತ ವೈದ್ಯಕೀಯ ಚಿಕಿತ್ಸೆ ದೊರೆಕಿಸಲೂ ನೆರವಾಗುತ್ತದೆ ಎಂದರು.

₹ 250 ಕೋಟಿ ವೆಚ್ಚದ ಯೋಜನೆ:

ಶಬರಿಮಲೆ ರೋಪ್‌ವೇ 2.7 ಕಿ.ಮೀ ಉದ್ದದ ಕೇಬಲ್‌ ಕಾರ್‌ ವ್ಯವಸ್ಥೆಯಾಗಿದ್ದು, ಪಂಪಾದಿಂದ ಸನ್ನಿಧಾನಂನ ತುದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ₹250 ಕೋಟಿ ಮೊತ್ತದ ಯೋಜನೆಯಾಗಿದೆ. ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ (ಬಿಒಟಿ) ಆಧಾರದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. 

ಈ ಯೋಜನೆಯ ಪೂರ್ಣಗೊಳ್ಳಲು 2027ರವರೆಗೆ ಸಮಯ ನಿಗದಿಪಡಿಸಲಾಗಿದೆ. ಅದರೆ 2025ರ ವೇಳೆಗೆ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವರು ಪ್ರತಿಕ್ರಿಯಿಸಿದರು.  

ಪರಿಸರ ವಾದಿಗಳ ಟೀಕೆ: ಈ ಯೋಜನೆಗೆ ಸಾಕಷ್ಟು ಮರಗಳನ್ನು ಕಡಿಯಲಾಗುತ್ತದೆ ಮತ್ತು ಪೆರಿಯಾರ್‌ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿರುವ ಬೆಟ್ಟಗಳಿಂದ ಮಣ್ಣನ್ನು ತೆಗೆಯಲಾಗುತ್ತದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.