ಪಂಪಾ (ಕೇರಳ): ಶಬರಿಮಲೆಯಲ್ಲಿ ಮತ್ತೆ ಆತಂಕದ ವಾತಾರವಣ ಸೃಷ್ಟಿಯಾಗಿದೆ. ಅಯ್ಯಪ್ಪನ ದರ್ಶನ ಮಾಡದೇ ಹಿಂದಿರುಗುವ ಮಾತೇ ಇಲ್ಲ ಎಂದು ಶಪಥ ಮಾಡಿದ ಮಹಿಳಾತಂಡವೊಂದು ಪಂಪಾ ಬೇಸ್ ಕ್ಯಾಂಪ್‌ನಲ್ಲಿ ಬೀಡುಬಿಟ್ಟಿದೆ.
ಪೊಲೀಸರ ಬಿಗಿಭದ್ರತೆಯೊಂದಿಗೆ ಪಂಪಾ ಬೇಸ್ ಕ್ಯಾಂಪ್‌ಗೆ ತಲುಪಿದ ಚೆನ್ನೈ ಮೂಲದ ಮಣಿತಿ ಸಂಘಟನೆಯ ಮಹಿಳೆಯರನ್ನು ಪ್ರತಿಭಟನಾಕರರು ತಡೆದಿದ್ದಾರೆ. ‘ನಾವು ಒಟ್ಟು 40 ಮಂದಿ ಇದ್ದು, ಪ್ರತಿಭಟನಾಕಾರರು ಕೇವಲ 11 ಮಂದಿಯನ್ನಷ್ಟೇ ಗುರುತಿಸಿ, ತಡೆಹಿಡಿದಿದ್ದಾರೆ’ ಎಂದು ಮಣಿತಿ ಮುಖ್ಯಸ್ಥೆ ಎಲ್. ವಸಂತಿ ಹೇಳಿದರು.
ಸ್ಥಳದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಅಲ್ಲಿನ ಅಹಿತಕರ ವಾತಾವರಣದ ಬಗ್ಗೆ ಮಹಿಳೆಯರಿಗೆ ತಿಳಿಸಿದ್ದಾರೆ. ಆದರೆ, ಅಯ್ಯಪ್ಪನ ದರ್ಶನ ಮಾಡದೇ ಅಲ್ಲಿಂದ ಹೋಗುವುದಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ. ದೇವಸ್ಥಾನ ಮತ್ತು ಅದರ ಎರಡು ಬೇಸ್ ಕ್ಯಾಂಪ್‌ಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದರೂ ಅದನ್ನು ಮೀರಿ ಭಕ್ತರು ಪ್ರತಿಭಟನೆ ಮುಂದುವರಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾಕಾರರುಸೇರುವ ಆತಂಕದಿಂದ ಪೊಲೀಸರು ತಾತ್ಕಾಲಿಕವಾಗಿ ಬಸ್‌ಗಳ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ‘ಕೇರಳ ಪೊಲೀಸರು ಸೂಕ್ತ ಭದ್ರತೆ ಒದಗಿಸುತ್ತೇವೆ ಎಂದು ಭರವಸೆ ನೀಡಿದ ನಂತರವೇ ನಾವು ಇಲ್ಲಿಗೆ ಬಂದೆವು. ಆದರೆ, ನಂತರ ಪೊಲೀಸರು ಅದನ್ನು ನಿರಾಕರಿಸಿದ್ದಾರೆ’ಎಂದು ಮಹಿಳೆಯೊಬ್ಬರು ತಿಳಿಸಿದರು.
ಶಬರಿಮಲೆಯಲ್ಲಿ ವಾರ್ಷಿಕ ‘ಮಂಡಲ ಪೂಜೆ’ಗೆ ಕೆಲವೇ ದಿನಗಳು ಬಾಕಿ ಇರುವ ವೇಳೆಯಲ್ಲಿಯೇ ದೇವಸ್ಥಾನದ ಆವರಣದಲ್ಲಿ ಆತಂಕದ ಸ್ಥೀತಿ ಬುಗಿಲೆದ್ದಿದೆ.ದೇಗುಲಕ್ಕೆ ಭೇಟಿ ನೀಡುವ ಕುರಿತು ಈಗಾಗಲೇ ಕೇರಳ ಮುಖ್ಯಮಂತ್ರಿ ಕಚೇರಿಗೆ ಪತ್ರ ಬರೆಯಲಾಗಿದೆ ಎಂದು ಸಂಘಟನೆಯ ಸದಸ್ಯೆ ಸೆಲ್ವಿ ಹೇಳಿದ್ದಾರೆ.
ಶುಕ್ರವಾರ ಒಂದೇ ದಿನ 1,12,260 ಭಕ್ತಾದಿಗಳು ದರ್ಶನ ಪಡೆದುಕೊಂಡಿದ್ದು, ಈ ವರ್ಷದ ದಾಖಲೆಯಾಗಿದೆ. ಮುಂಬರುವ ದಿನಗಳಲ್ಲಿ ಭಕ್ತಾದಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.