ADVERTISEMENT

ಶಬರಿಮಲೆಗೆ ಮಹಿಳೆಯರ ಪ‍್ರವೇಶ ವಿಚಾರ: ಇಂದೂ ಮಲ್ಹೋತ್ರಾ ಭಿನ್ನಮತ

ಪಿಟಿಐ
Published 28 ಸೆಪ್ಟೆಂಬರ್ 2018, 19:08 IST
Last Updated 28 ಸೆಪ್ಟೆಂಬರ್ 2018, 19:08 IST
ಇಂದೂ ಮಲ್ಹೋತ್ರಾ
ಇಂದೂ ಮಲ್ಹೋತ್ರಾ   

ನವದೆಹಲಿ:ಸಮಾನತೆಯ ಹಕ್ಕನ್ನು ಜಾರಿ ಮಾಡುವುದು ಅಯ್ಯಪ್ಪ ಸ್ವಾಮಿಯ ಭಕ್ತರ ಪೂಜೆಯ ಹಕ್ಕಿನ ಜತೆಗೆ ಸಂಘರ್ಷ ಹೊಂದಿದೆ ಎಂದು ಶಬರಿಮಲೆಗೆ ಮಹಿಳೆಯರ ಪ‍್ರವೇಶ ವಿಚಾರದಲ್ಲಿ ಭಿನ್ನಮತದ ತೀರ್ಪು ನೀಡಿರುವ ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಹೇಳಿದ್ದಾರೆ.

ಶಬರಿಮಲೆ ಅಯ್ಯಪ‍್ಪ ಸ್ವಾಮಿಯ ವಿಶಿಷ್ಟ ಲಕ್ಷಣದಿಂದಾಗಿ (ಬ್ರಹ್ಮಚರ್ಯ) ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆಯೇ ಹೊರತು ಅದು ಸಾಮಾಜಿಕ ಹೊರಗಿರಿಸುವಿಕೆ ಅಲ್ಲ ಎಂದು ಅವರುಅಭಿಪ್ರಾಯಪಟ್ಟಿದ್ದಾರೆ.

ಈ ಪ್ರಕರಣದ ಕೇಂದ್ರದಲ್ಲಿ ಇರುವ ಧರ್ಮದ ವಿಚಾರ ಶಬರಿಮಲೆಗೆ ಸೀಮಿತವಾದುದಲ್ಲ. ಇತರ ದೇವಾಲಯಗಳು ಮತ್ತು ಪೂಜಾಸ್ಥಳಗಳ ಮೇಲೆಯೂ ದೂರಗಾಮಿ ಪರಿಣಾಮಗಳನ್ನು ಬೀರಬಹುದಾಗಿದೆ.

ADVERTISEMENT

ತರ್ಕಸಮ್ಮತತೆಯನ್ನು ಧರ್ಮದ ವಿಚಾರಕ್ಕೆ ಎಳೆದು ತರಬಾರದು. ಭಾರತದಲ್ಲಿ ವೈವಿಧ್ಯಮಯವಾದ ಧಾರ್ಮಿಕ ಪದ್ಧತಿಗಳಿವೆ. ಪ್ರತಿ ವ್ಯಕ್ತಿಯು ತಾನು ನಂಬುವ ಧರ್ಮವನ್ನು ಆಚರಿಸುವುದಕ್ಕೆ ಸಂವಿಧಾನವು ಅವಕಾಶವನ್ನೂ ಕೊಡುತ್ತದೆ.

ಪೂಜಿಸುವ ಮೂಲಭೂತ ಹಕ್ಕನ್ನು ಸಮಾನತೆಯ ಸಿದ್ಧಾಂತವು ಉಲ್ಲಂಘಿಸಬಾರದು ಎಂದು ಇಂದೂ ಮಲ್ಹೋತ್ರಾ ಪ್ರತಿಪಾದಿಸಿದ್ದಾರೆ.

‘ಈ ದೇವಾಲಯದಲ್ಲಿನ ಪೂಜೆಯ ರೀತಿ ರಿವಾಜಿನಲ್ಲಿ ನಡೆಸುವ ಯಾವುದೇ ಹಸ್ತಕ್ಷೇಪ ದೇವಾಲಯದ ಸ್ವರೂಪದ ಮೇಲೆಯೇ ಪರಿಣಾಮ ಬೀರುತ್ತದೆ. ಈ ದೇವಾಲಯದ ಮೇಲೆ ನಂಬಿಕೆ ಇರುವವರು ಮತ್ತು ಪೂಜಿಸುವವರ ನಂಬಿಕೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

**

ಭಕ್ತಿಯನ್ನು ತಾರತಮ್ಯದಿಂದ ನೋಡಬಾರದು ಮತ್ತು ಭಕ್ತಿಯಲ್ಲಿನ ಸಮಾನತೆಯನ್ನು ತುಳಿದು ಹಾಕಲು ಪುರುಷ ಪ್ರಧಾನ ಮನಸ್ಥಿತಿ ಬಳಸಬಾರದು.

-ದೀಪಕ್‌ ಮಿಶ್ರಾ, ಮುಖ್ಯ ನ್ಯಾಯಮೂರ್ತಿ

**

ಮಹಿಳೆಯರ ಆರಾಧನೆಯ ಹಕ್ಕನ್ನು ನಿರಾಕರಿಸಲು ಧರ್ಮವನ್ನು ನೆಪವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಇದು ಮಾನವ ಘನತೆಗೆ ವಿರುದ್ಧವಾದುದು.

-ಚಂದ್ರಚೂಡ್‌,ನ್ಯಾಯಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.