ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ಮಹಾ ಅಘಾಡಿ ವಿಕಾಸ (ಎಂವಿಎ) ಮೈತ್ರಿಕೂಟದಲ್ಲಿ ಇನ್ನೂ ಬಿಕ್ಕಟ್ಟು ಮುಂದುವರಿದಿದೆ. ಯಾರಿಗಾದರೂ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಘೋಷಣೆಯ ಅಗತ್ಯವಿದ್ದರೆ, ಅದು ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಶನಿವಾರ ಹೇಳಿದ್ದಾರೆ.
ದೇಶದ ಅಭಿವೃದ್ಧಿಗೆ ತಮ್ಮ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಲು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಆಗಾಗ್ಗೆ ಹೇಳುವ ಘೋಷಣೆ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ (ಎಲ್ಲರೊಂದಿಗೆ ಎಲ್ಲರ ವಿಕಾಸ) ಆಗಿದೆ. ನಾಮಪತ್ರ ಸಲ್ಲಿಕೆಗೆ ದಿನ ಸಮೀಪಿಸುತ್ತಿರುವಾಗ, ಬಾಕಿ ಇರುವ ಟಿಕೆಟ್ ಹಂಚಿಕೆ ಅಂತಿಮಗೊಳ್ಳದಿರುವ ಹಿನ್ನೆಲೆಯಲ್ಲಿ ರಾವುತ್ ವಿಪಕ್ಷಗಳು ಒಗ್ಗಟ್ಟು ಕಾಯ್ದುಕೊಳ್ಳಬೇಕೆಂಬುದಕ್ಕೆ ಈ ಮಾತು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ರೈತರು ಮತ್ತು ಕಾರ್ಮಿಕರ ಪಕ್ಷ (ಪಿಡಬ್ಲ್ಯುಪಿ) ಮತ್ತು ಸಮಾಜವಾದಿ ಪಕ್ಷದಂತಹ (ಎಸ್‌ಪಿ) ಸಣ್ಣ ಪಕ್ಷಗಳು, ಎಂವಿಎ ಈಗಾಗಲೆ ಟಿಕೆಟ್ ಹಂಚಿಕೆ ಮಾಡಿರುವ ಸ್ಥಾನಗಳಿಗೆ ಏಕ ಪಕ್ಷೀಯವಾಗಿ ಅಭ್ಯರ್ಥಿಗಳನ್ನು ಘೋಷಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮುನ್ನ, ಎಂವಿಎ ಪಾಲುದಾರರಾದ ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನೆ (ಯುಬಿಟಿ) ತಲಾ 85 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದವು. ನಂತರ, 288 ಸ್ಥಾನಗಳ ಪೈಕಿ 270 ಸ್ಥಾನಗಳಲ್ಲಿ ಸ್ಪರ್ಧಿಸಲು ಎಂವಿಎ ಮಿತ್ರಪಕ್ಷಗಳಲ್ಲಿ ಒಮ್ಮತವಿದೆ ಎಂದು ರಾವುತ್ ಹೇಳಿದ್ದರು.
ಎಂವಿಎ ಸಣ್ಣ ಪಕ್ಷಗಳೊಂದಿಗೆ ಒಮ್ಮತಕ್ಕೆ ಬರದಿದ್ದರೆ 20-25 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಲಿದೆ ಎಂದು ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಅಬು ಅಜ್ಮಿ ಶುಕ್ರವಾರ ಹೇಳಿದ್ದಾರೆ. ಎಸ್‌ಪಿ ಈಗಾಗಲೇ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಏಳು ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ.
ಸೇನಾ (ಯುಬಿಟಿ) ಅನಿಲ್ ಗೋಟೆ ಅವರನ್ನು ಕಣಕ್ಕಿಳಿಸಿರುವ ಧೂಲೆ ನಗರಕ್ಕೆ ಇರ್ಷಾದ್ ಜಹಗೀರ್ದಾರ್ ಅವರನ್ನು ಎಸ್‌ಪಿ ಕಣಕ್ಕಿಳಿಸಿದೆ. ಸಂಗೋಲಾ ಮತ್ತು ಅಲಿಬಾಗ್ ಸ್ಥಾನಗಳಿಗೆ ಸೇನಾ (ಯುಬಿಟಿ) ಮತ್ತು ಪಿಡಬ್ಲ್ಯುಪಿ ಪಟ್ಟುಹಿಡಿದಿವೆ. ಈ ಎರಡು ಸ್ಥಾನಗಳಲ್ಲಿ ಆ ಪಕ್ಷಗಳು ಒಂದೊಂದು ಸ್ಥಾನ ಈ ಹಿಂದೆ ಗೆದ್ದಿವೆ. ಆದರೆ, ಈಗ ಈ ಎರಡೂ ಕ್ಷೇತ್ರಗಳಿಗೆ ಪಿಡಬ್ಲ್ಯುಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ರಾವುತ್ ಹೇಳಿದರು.
‘ಹರಿಯಾಣದಲ್ಲಿ ಕಾಂಗ್ರೆಸ್ ಎಲ್ಲ ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ ಸರ್ಕಾರ ರಚಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು’ ಎಂದು ರಾವುತ್ ಹೇಳಿದರು.
‘ಎಂವಿಎ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕ್ಷೇತ್ರಗಳಿಗೆ ಎಸ್‌ಪಿ ಮತ್ತು ಪಿಡಬ್ಲ್ಯುಪಿ ಅಭ್ಯರ್ಥಿಗಳನ್ನು ಘೋಷಿಸಿರುವುದು ಸರಿಯಲ್ಲ. ಎಂವಿಎಯಿಂದ ಯಾರೇ ಈ ರೀತಿ ಮಾಡಿದರೂ ಜನರಿಗೆ ಬೇಸರ ಉಂಟಾಗಲಿದೆ. ನಾವು ಮಾತುಕತೆಯನ್ನು ಮುಂದುವರಿಸುತ್ತೇವೆ’ ಎಂದು ರಾವತ್ ಹೇಳಿದರು.
ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಸೀಟು ಹಂಚಿಕೆ ಕುರಿತು ಪಿಡಬ್ಲ್ಯುಪಿ ಜತೆ ಚರ್ಚಿಸಲಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.